ಚೀನಾದಿಂದ ತೈವಾನ್ ಜಲಸಂಧಿಯ ಸೂಚಿತ ಒಪ್ಪಂದ ನಾಶ: ತೈವಾನ್

Update: 2022-10-05 16:51 GMT

 ತೈಪೆ, ಅ.5: ತೈವಾನ್ ಜಲಸಂಧಿಯಲ್ಲಿನ ಮಿಲಿಟರಿ ಚಲನೆಗಳಿಗೆ ಸಂಬಂಧಿಸಿದ ಸೂಚಿತ(ಧ್ವನಿತ) ಒಪ್ಪಂದವನ್ನು ಚೀನಾ ನಾಶಗೊಳಿಸಿದೆ ಎಂದು ತೈವಾನ್ನ ರಕ್ಷಣಾ ಸಚಿವ ಚಿಯು ಕ್ವೊಚೆಂಗ್ ಬುಧವಾರ ಹೇಳಿದ್ದಾರೆ.

    ತೈವಾನ್ ಜಲಸಂಧಿಯಲ್ಲಿನ ಅನಧಿಕೃತ ‘ಮಧ್ಯದ ರೇಖೆ’ಯನ್ನು ದಾಟುವ ಮೂಲಕ ಚೀನಾ ಈ ಕುರಿತ ಸೂಚಿತ ಒಪ್ಪಂದವನ್ನು ಉಲ್ಲಂಘಿಸಿದೆ. ಚೀನಾ ‘ಕೆಂಪು ಗೆರೆ’ಯನ್ನು ದಾಟಿದರೆ ತೈವಾನ್ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂದವರು ತೈವಾನ್ನ ಸಂಸತ್ತಿನಲ್ಲಿ ಹೇಳಿದ್ದಾರೆ. ಮಧ್ಯದ ರೇಖೆಯು ಎಲ್ಲರಿಗೂ ಸಂಬಂಧಿಸಿದ ಸೂಚಿತ ಒಪ್ಪಂದವಾಗಿದೆ. ಕೆಂಪು ಗೆರೆ ಎಂದರೆ ತೈವಾನ್ ಜಲಸಂಧಿಯಲ್ಲಿನ ಮಧ್ಯಮ ರೇಖೆಯಲ್ಲ, ಚೀನಾದ ಯುದ್ಧವಿಮಾನ, ಡ್ರೋನ್ಗಳು ತೈವಾನ್ ಪ್ರದೇಶಕ್ಕೆ ಹಾರಾಟ ನಡೆಸುವುದು ಇದರಲ್ಲಿ ಸೇರಿದೆ ಎಂದರು.

  ಕಮ್ಯುನಿಸ್ಟ್ ಚೀನಾ ಮತ್ತು ಅಮೆರಿಕ ಬೆಂಬಲಿತ ತೈವಾನ್ ನಡುವಿನ ಶೀತಲ ಸಮರದ ಹಗೆತನ ಪರಾಕಾಷ್ಟೆಗೆ ಏರಿದ್ದ 1954ರಲ್ಲಿ ಅಮೆರಿಕದ ಅಧಿಕಾರಿ ತೈವಾನ್ ಜಲಸಂಧಿಯಲ್ಲಿ ರೂಪಿಸಿದ್ದ ಮಧ್ಯದ ರೇಖೆಗೆ ಚೀನಾ ಯಾವತ್ತೂ ಅಧಿಕೃತ ಮಾನ್ಯತೆ ನೀಡಿಲ್ಲ. ಆದರೂ ಚೀನಾದ ಸೇನೆ ಈ ಒಪ್ಪಂದವನ್ನು ವ್ಯಾಪಕವಾಗಿ ಗೌರವಿಸುತ್ತಿದೆ. ತೈವಾನ್ ಜಲಸಂಧಿಯು ಸುಮಾರು 180 ಕಿಮೀ ಅಗಲವಿದೆ ಮತ್ತು ಅದರ ಕಿರಿದಾದ ಮಧ್ಯದ ರೇಖೆಯು ತೈವಾನ್ ಸಮುದ್ರವ್ಯಾಪ್ತಿಯಿಂದ ಸುಮಾರು 40 ಕಿಮೀ ದೂರದಲ್ಲಿದೆ. ಮದ್ಯದ ರೇಖೆಯನ್ನು ಚೀನಾ ಉಲ್ಲಂಘಿಸಿರುವುದು ಆ ದೇಶದ ಬದಲಾದ ಧೋರಣೆಯನ್ನು ಸೂಚಿಸುತ್ತದೆ ಮತ್ತು ಇದನ್ನು ತೈವಾನ್ ವಿರೋಧಿಸುತ್ತದೆ. 

ಅವರು ಹೊಸ ವ್ಯವಸ್ಥೆಯನ್ನು ಸ್ಥಾಪಿಸಲು ಬಯಸಿದ್ದಾರೆ ಆದರೆ ನಾವು ಬದಲಾಗುವುದಿಲ್ಲ. ಅವರು ಈ ವಿಷಯದಲ್ಲಿ ಮುಂದೆ ಬಂದರೆ ನಮ್ಮ ನಿಲುವು ಸ್ಥಿರವಾಗಿರುತ್ತದೆ ಮತ್ತು ಇದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಚಿಯು ಹೇಳಿದ್ದಾರೆ. ಕಲ್ಪಿತ ಮಧ್ಯದ ರೇಖೆಯನ್ನು ಚೀನಾ ಹಲವು ವರ್ಷ ಸೂಚಿತವಾಗಿ ಒಪ್ಪಿಕೊಂಡು ಬಂದಿತ್ತು. ಆದರೆ ಮಧ್ಯದ ರೇಖೆಯೇ ಅಸ್ತಿತ್ವದಲ್ಲಿ ಇಲ್ಲ ಎಂದು 2020ರಲ್ಲಿ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿಕೆ ನೀಡಿದ್ದರು.

 ತೈವಾನ್ ಚೀನಾದ ಪ್ರದೇಶವಾಗಿರುವುದರಿಂದ ತನ್ನ ಸಶಸ್ತ್ರ ಪಡೆಗಳಿಗೆ ತೈವಾನ್ ಸುತ್ತಮುತ್ತ ಕಾರ್ಯನಿರ್ವಹಿಸುವ ಅಧಿಕಾರವಿದೆ ಎಂದು ಚೀನಾದ ಸೇನೆ ಪ್ರತಿಪಾದಿಸಿತ್ತು. ಆದರೆ ಚೀನಾದ ಸಾರ್ವಭೌಮತ್ವ ಪ್ರತಿಪಾದನೆಯನ್ನು ತಿರಸ್ಕರಿಸಿರುವ ತೈವಾನ್, ದೇಶದ ಜನತೆ ತಮ್ಮ ಭವಿಷ್ಯವನ್ನು ತಾವೇ ರೂಪಿಸಲಿದ್ದಾರೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News