ಇರಾನ್ ನಲ್ಲಿ ಭೂಕಂಪ: 528 ಮಂದಿಗೆ ಗಾಯ
ಟೆಹ್ರಾನ್, ಅ.5: ವಾಯವ್ಯ ಇರಾನ್ನಲ್ಲಿ ಬುಧವಾರ ಬೆಳಿಗ್ಗೆ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಶ್ಚಿಮ ಅಝರ್ಬೈಜಾನ್ ಪ್ರಾಂತದಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು ಇದುವರೆಗಿನ ಮಾಹಿತಿಯಂತೆ 528 ಮಂದಿ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ 135 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂಕಂಪ ಹಾಗೂ ಆ ಬಳಿಕದ ಪಶ್ಚಾತ್ ಕಂಪನದಿಂದ ಪೀಡಿತ 12 ಗ್ರಾಮಗಳಲ್ಲಿ ಸುಮಾರು 200 ಕಟ್ಟಡಗಳು, 500 ಮನೆಗಳು ಹಾನಿಗೊಂಡಿದ್ದು ಅದರಲ್ಲಿ 50 ಮನೆಗಳು ಸಂಪೂರ್ಣ ಹಾನಿಗೀಡಾಗಿದೆ ಎಂದು ಪ್ರಾಂತದ ಗವರ್ನರ್ ಮುಹಮ್ಮದ್ ಸದೆಗ್ ಹೇಳಿದ್ದಾರೆ.
ಹಲವು ಅಂಗಡಿಗಳು, ಮಾರುಕಟ್ಟೆಗಳು, ಮನೆಗಳು ನಾಶಗೊಂಡಿದ್ದು ಹಲವು ಗ್ರಾಮಗಳಿಗೆ ವಿದ್ಯುತ್ ಮತ್ತು ನೀರಿನ ಪೂರೈಕೆ ಮೊಟಕುಗೊಂಡಿದೆ. ಸಲ್ಮಾಸ್ ಮತ್ತು ಖೋಯ್ ನಗರಗಳ ಬಳಿ ಭೂಕಂಪ ಕೇಂದ್ರೀಕೃತಗೊಂಡಿತ್ತು ಎಂದು ರಾಷ್ಟ್ರೀಯ ತುರ್ತು ಸೇವಾ ಘಟಕದ ವಕ್ತಾರ ಮೊಜ್ತಬಾ ಖಲೆಡಿ ಮಾಹಿತಿ ನೀಡಿದ್ದಾರೆ.