ಕ್ರಿಮಿಯಾ ಸೇತುವೆ ಸ್ಫೋಟ: 3 ಮಂದಿ ಮೃತ್ಯು

Update: 2022-10-08 17:20 GMT

ಮಾಸ್ಕೋ, ಅ.8: ಕ್ರಿಮಿಯಾವನ್ನು ಮೈನ್ಲ್ಯಾಂಡ್ ರಶ್ಯದೊಂದಿಗೆ ಸಂಪರ್ಕಿಸುವ ಸೇತುವೆಗೆ ಸ್ಫೋಟಕ ತುಂಬಿದ್ದ ಟ್ರಕ್ ಒಂದು ಅಪ್ಪಳಿಸಿದ ಕಾರಣ ಸಂಭವಿಸಿದ ಸ್ಫೋಟದಲ್ಲಿ 3 ಮಂದಿ ಮೃತಪಟ್ಟಿದ್ದಾರೆ ಎಂದು ರಶ್ಯ ಶನಿವಾರ ಹೇಳಿದೆ.

ಉಕ್ರೇನ್ಗೆ ಸೇರಿದ್ದ ಕ್ರಿಮಿಯಾ ಪ್ರಾಂತವನ್ನು ರಶ್ಯ ಈ ಹಿಂದೆ ವಶಕ್ಕೆ ಪಡೆದು ಸ್ವಾಧೀನಪಡಿಸಿಕೊಂಡಿತ್ತು. ಇದೀಗ ಕ್ರಿಮಿಯಾ-ರಶ್ಯ ಸಂಪರ್ಕದ ಕೊಂಡಿಯಾಗಿರುವ ಸೇತುವೆ ಸ್ಫೋಟಗೊಂಡಿರುವ ಹಿಂದೆ ಉಕ್ರೇನ್ನ ಕೈವಾಡವಿದೆ ಎಂದು ರಶ್ಯ ಆರೋಪಿಸಿದೆ.

ಉಕ್ರೇನ್ ಮೇಲಿನ ಆಕ್ರಮಣದಲ್ಲಿ ರಶ್ಯಕ್ಕೆ ಬಹುಮುಖ್ಯವಾಗಿರುವ 19 ಕಿ.ಮೀ ಉದ್ದದ ಸೇತುವೆ ಸ್ಫೋಟಗೊಂಡಿರುವುದರಿAದ ಈ ಪ್ರಾಂತದೊಂದಿಗೆ ರಸ್ತೆ ಸಂಪರ್ಕಕ್ಕೆ ತೊಡಕಾಗಿದೆ. ಭಾರೀ ಸ್ಫೋಟದೊಂದಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದು ಹಾಗೂ ಸೇತುವೆಯ ಭಾಗ ತುಂಡಾಗಿ ನೀರಿಗೆ ಬೀಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ್ರಾಥಮಿಕ ಮಾಹಿತಿಯಂತೆ ಮಹಿಳೆಯ ಸಹಿತ 3 ಮಂದಿಯ ಮೃತದೇಹವನ್ನು ನೀರಿನಿಂದ ಮೇಲೆತ್ತಲಾಗಿದೆ. ಸ್ಫೋಟಕ ತುಂಬಿದ್ದ ಟ್ರಕ್ ಸೇತುವೆಗೆ ಡಿಕ್ಕಿಯಾದಾಗ ಸ್ಥಳದಲ್ಲಿದ್ದ ಕಾರಿನಲ್ಲಿ ಈ ಮೂವರಿದ್ದರು ಎಂದು ರಶ್ಯದ ತನಿಖಾ ಸಮಿತಿಯ ಹೇಳಿಕೆ ತಿಳಿಸಿದೆ.

ಟ್ರಕ್ ನ ಮಾಲಕ ರಶ್ಯದ ದಕ್ಷಿಣದ ಕ್ರಸ್ನೋಡರ್ ವಲಯದ ನಿವಾಸಿ ಎಂದು ಗುರುತಿಸಲಾಗಿದ್ದು ಆತನ ಮನೆಯಲ್ಲಿ ಶೋಧ ನಡೆಸಲಾಗಿದೆ. ಸ್ಫೋಟದಿಂದ ಸಮೀಪದಲ್ಲಿ ರೈಲಿನ ಮೂಲಕ ಸಾಗುತ್ತಿದ್ದ 7 ತೈಲ ಟ್ಯಾಂಕರ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ಹೆದ್ದಾರಿಯ 2 ಕಾರು ಪಥವನ್ನು ಧ್ವಂಸಗೊಳಿಸಿದೆ. ಈ ರಸ್ತೆಯನ್ನು 2018ರಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉದ್ಘಾಟಿಸಿದ್ದರು.

ಈ ಮಧ್ಯೆ, ಅಕ್ರಮವಾಗಿರುವ ಎಲ್ಲವೂ ನಾಶಗೊಳ್ಳಬೇಕು. ಉಕ್ರೇನ್ನಿಂದ ಕದಿಯಲಾದ ಎಲ್ಲವನ್ನೂ ಮರಳಿಸಬೇಕು, ರಶ್ಯ ಆಕ್ರಮಿಸಿಕೊಂಡಿರುವ ಎಲ್ಲವನ್ನೂ ಹೊರಹಾಕಬೇಕು ಎಂದು  ಉಕ್ರೇನ್ ಅಧ್ಯಕ್ಷರ ವಕ್ತಾರ ಮಿಖಾಯಿಲೊ ಪೊಡೊಲ್ಯಾಕ್ ಟ್ವೀಟ್ ಮಾಡಿದ್ದಾರೆ. ಸ್ಫೋಟ ಘಟನೆಯ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸುವಂತೆ ರಶ್ಯ ಅಧ್ಯಕ್ಷ ಪುಟಿನ್ ಸೂಚಿಸಿದ್ದಾರೆ ಎಂದು ಪುಟಿನ್ ಅವರ ವಕ್ತಾರರು ಹೇಳಿದ್ದಾರೆ. ಸೇತುವೆ ಸ್ಫೋಟಗೊಂಡಿರುವುದಕ್ಕೆ ಉಕ್ರೇನ್ನ ಪ್ರತಿಕ್ರಿಯೆ ಆ ದೇಶದ ಭಯೋತ್ಪಾದಕ ಸ್ವರೂಪವನ್ನು ತೋರಿಸಿದೆ ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News