ಎರಡನೇ ಏಕದಿನ: ಭಾರತಕ್ಕೆ 7 ವಿಕೆಟ್ ಗೆಲುವು, ಸರಣಿ ಸಮಬಲ
ರಾಂಚಿ, ಅ.9: ಮಧ್ಯಮ ಸರದಿಯ ಬ್ಯಾಟರ್ ಶ್ರೇಯಸ್ ಅಯ್ಯರ್ ಶತಕ (ಔಟಾಗದೆ 113 ರನ್, 111 ಎಸೆತ, 15 ಬೌಂಡರಿ) ಹಾಗೂ ಇಶಾನ್ ಕಿಶನ್ (93 ರನ್, 84 ಎಸೆತ) ಅರ್ಧಶತಕದ ಸಹಾಯದಿಂದ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 45.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿ ಗೆಲುವಿನ ದಡ ಸೇರಿತು.
ಗೆಲ್ಲಲು ಸವಾಲಿನ ಮೊತ್ತ ಪಡೆದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಆತಿಥೇಯರು 48 ರನ್ ಗಳಿಸಿದಾಗ ನಾಯಕ ಶಿಖರ್ ಧವನ್(13ರನ್) ಹಾಗೂ ಶುಭಮನ್ ಗಿಲ್(28 ರನ್) ವಿಕೆಟ್ ಕಳೆದುಕೊಂಡರು. ಆಗ ಜೊತೆಯಾದ ಇಶಾನ್ ಕಿಶನ್(93 ರನ್, 84 ಎಸೆತ, 4 ಬೌಂಡರಿ, 7 ಸಿಕ್ಸರ್)ಹಾಗೂ ಉಪ ನಾಯಕ ಶ್ರೇಯಸ್ ಅಯ್ಯರ್ 3ನೇ ವಿಕೆಟಿಗೆ 161 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ರಿಪೇರಿ ಮಾಡಿದರು. ಕಿಶನ್ ವಿಕೆಟನ್ನು ಪಡೆದ ಫಾರ್ಚೂನ್ ಈ ಜೋಡಿಯನ್ನು ಬೇರ್ಪಡಿಸಿದರು. ಕಿಶನ್ ಕೇವಲ 7 ರನ್‌ನಿಂದ ಚೊಚ್ಚಲ ಶತಕದಿಂದ ವಂಚಿತರಾದರು.
43ನೇ ಓವರ್‌ನಲ್ಲಿ ರಬಾಡ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಅಯ್ಯರ್ 103 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ ಏಕದಿನ ಕ್ರಿಕೆಟ್‌ನಲ್ಲಿ 2ನೇ ಶತಕ ಸಿಡಿಸಿದರು.
ಕಿಶಾನ್ ಔಟಾದ ಬಳಿಕ ಜೊತೆಯಾದ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್(ಔಟಾಗದೆ 30, 36 ಎಸೆತ, 1 ಬೌಂಡರಿ, 1 ಸಿಕ್ಸರ್)4ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 73 ರನ್ ಸೇರಿಸಿ ಇನ್ನೂ 25 ಎಸೆತಗಳು ಬಾಕಿ ಇರುವಾಗಲೇ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು.
ದಕ್ಷಿಣ ಆಫ್ರಿಕಾ 278/7: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಮರ್ಕ್ರಮ್(79 ರನ್, 89 ಎಸೆತ, 7 ಬೌಂಡರಿ, 1 ಸಿಕ್ಸರ್)ಹಾಗೂ ರೀಝಾ ಹೆಂಡ್ರಿಕ್ಸ್(74 ರನ್, 76 ಎಸೆತ, 9 ಬೌಂಡರಿ, 1 ಸಿಕ್ಸರ್)3ನೇ ವಿಕೆಟಿಗೆ 129 ರನ್ ಜೊತೆಯಾಟ ನಡೆಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು. ಹೆಂಡ್ರಿಕ್ಸ್ ವಿಕೆಟ್ ಒಪ್ಪಿಸಿದ ಬಳಿಕ ಮರ್ಕ್ರಮ್ ಅವರು ಕ್ಲಾಸೆನ್ (30 ರನ್) ಜೊತೆಗೂಡಿ 4ನೇ ವಿಕೆಟಿಗೆ 46 ರನ್ ಸೇರಿಸಿದರು.
ಪಾರ್ನೆಲ್(16 ರನ್) ಹಾಗೂ ಡೇವಿಡ್ ಮಿಲ್ಲರ್(ಔಟಾಗದೆ 35 ರನ್, 34 ಎಸೆತ, 4 ಬೌಂಡರಿ) 6ನೇ ವಿಕೆಟಿಗೆ 41 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಭಾರತದ ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಸಿರಾಜ್(3-38)ಅತ್ಯುತ್ತಮ ಬೌಲಿಂಗ್‌ನಿಂದ ಗಮನ ಸೆಳೆದರು. ಸುಂದರ್, ಶಹಬಾಝ್ ಅಹ್ಮದ್, ಕುಲದೀಪ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.