ಡೆಮಾಕ್ರಟಿಕ್ ಪಕ್ಷ ತೊರೆದ ಅಮೆರಿಕ ಸಂಸದೆ ತುಳಸಿ ಗಬ್ಬಾರ್ಡ್

Update: 2022-10-12 02:39 GMT
ತುಳಸಿ ಗಬ್ಬಾರ್ಡ್

ವಾಷಿಂಗ್ಟನ್: ಅಮೆರಿಕದ ಪ್ರಪ್ರಥಮ ಹಿಂದೂ-ಅಮೆರಿಕನ್ ಸಂಸದೆ ಎಂದು ಬಿಂಬಿಸಿಕೊಂಡಿರುವ ಹಾಗೂ ಭಾರತದಲ್ಲಿ ಬಿಜೆಪಿ-ಆರೆಸ್ಸೆಸ್ ಜತೆ ನಿಕಟ ನಂಟು ಹೊಂದಿರುವ ತುಳಸಿ ಗಬ್ಬಾರ್ಡ್ ಡೆಮಾಕ್ರೆಟಿಕ್ ಪಕ್ಷ ತೊರೆದಿದ್ದಾರೆ ಎಂದು timesofindia.com ವರದಿ ಮಾಡಿದೆ. 

2020ರಲ್ಲಿ ಅಮೆರಿಕದ ಅಧ್ಯಕ್ಷ ಪದವಿಗೆ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದ ಗಬ್ಬಾರ್ಡ್, ಪಕ್ಷವನ್ನು ತೊರೆಯುತ್ತಿರುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷ "ಕೆರಳಿದ, ಬಿಳಿಯರ ವಿರೋಧಿ ಹಾಗೂ ಯುದ್ಧಾಸಕ್ತರ" ಪ್ರಾಬಲ್ಯದಲ್ಲಿ ಸಿಲುಕಿದೆ ಎಂದು ಅವರು ಆಪಾದಿಸಿದ್ದಾರೆ.

"ಪ್ರತಿ ವಿಷಯದಲ್ಲಿ ವರ್ಣಭೇದದ ವಿಭಜನೆಯಲ್ಲಿ ತೊಡಗಿದ, ಬಿಳಿಯರ ವಿರೋಧಿ ನೀತಿ ಅನುಸರಿಸುವ, ನಮ್ಮ ಸಂವಿಧಾನ ನೀಡಿದ ದೇವರಿಂದ ಕೊಡಮಾಡಿದ ಸ್ವಾತಂತ್ರ್ಯವನ್ನು ಕಡೆಗಣಿಸುವಲ್ಲಿ ಸಕ್ರಿಯವಾಗಿ ತೊಡಗಿದವರಿಂದ ಕೂಡಿದ ಇಂದಿನ ಡೆಮಾಕ್ರೆಟಿಕ್ ಪಕ್ಷದಲ್ಲಿ ನಾನು ಉಳಿಯಲು ಬಯಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

"ಧಾರ್ಮಿಕ ಶ್ರದ್ಧೆ ಮತ್ತು ಆಧ್ಯಾತ್ಮದ ಬಗೆಗೆ ಒಲವು ಹೊಂದಿದ ವ್ಯಕ್ತಿಗಳ ಬಗ್ಗೆ ಪಕ್ಷ ದ್ವೇಷಭಾವನೆ ಹೊಂದಿದೆ. ಕಾನೂನು ಗೌರವಿಸುವ ಅಮೆರಿಕನ್ನರಿಗೆ ಕಿರುಕುಳ ನೀಡಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ" ಎಂದು ಆಪಾದಿಸಿದ್ದಾರೆ. ರಾಜಕೀಯ ವಿರೋಧಿಗಳ ಮೇಲೆ ಸವಾರಿ ಮಾಡಲು ರಾಷ್ಟ್ರೀಯ ಭದ್ರತೆಯನ್ನು ಅಸ್ತ್ರವಾಗಿ ಪಕ್ಷದ ಮುಖಂಡರು ಬಳಸಲಾಗುತ್ತಿದ್ದು, ನಮ್ಮನ್ನು ಅಣ್ವಸ್ತ್ರ ಯುದ್ಧದತ್ತ ಎಳೆದೊಯ್ದುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

2020ರ ಅಧ್ಯಕ್ಷೀಯ ಅಭ್ಯರ್ಥಿಯ ಹುದ್ದೆಗೆ ಜೋ ಬೈಡನ್ ಅವರ ಉಮೇದುವಾರಿಕೆಯನ್ನು ಅನುಮೋದಿಸಿ ಕೊನೆ ಕ್ಷಣದಲ್ಲಿ ಗಬ್ಬಾರ್ಡ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News