ಇರಾನ್ ಜೈಲಿನಲ್ಲಿ ಬೆಂಕಿ ದುರಂತ: 4 ಮಂದಿ ಮೃತ್ಯು; 61 ಮಂದಿಗೆ ಗಾಯ

Update: 2022-10-16 18:27 GMT
PHOTO: TWITTER

ಟೆಹ್ರಾನ್, ಅ.16: ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಎವಿನ್ ಜೈಲಿನಲ್ಲಿ ಶನಿವಾರ ರಾತ್ರಿಯ ಬೆಂಕಿ ದುರಂತದಲ್ಲಿ 4 ಕೈದಿಗಳು ಮೃತಪಟ್ಟಿದ್ದು ಇತರ 61 ಮಂದಿ ಗಾಯಗೊಂಡಿರುವುದಾಗಿ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಕೈದಿಗಳ ಎರಡು ಗುಂಪಿನ ಮಧ್ಯೆ ನಡೆದ ಘರ್ಷಣೆಯ ಸಂದರ್ಭ ಬಟ್ಟೆ ಸಂಗ್ರಹಿಸಿಟ್ಟಿದ್ದ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಜೈಲಿನೆಲ್ಲೆಡೆ ವ್ಯಾಪಿಸಿದೆ. ಬೆಂಕಿಯಿಂದ ಉಂಟಾದ ಹೊಗೆಯಿಂದಾಗಿ ನಾಲ್ವರು ಕೈದಿಗಳು ಉಸಿರುಗಟ್ಟಿ ಮೃತಪಟ್ಟಿದ್ದು ಇತರ 61 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 4 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಗ್ನಿಶಾಮಕ ದಳ ಮತ್ತು ಬಂದಿಖಾನೆ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಸರಕಾರಿ ನಿಯಂತ್ರಣದ ಮಾಧ್ಯಮ ಇರ್ನಾ ವರದಿ ಮಾಡಿದೆ. ಆರ್ಥಿಕ ಅಪರಾಧ ಮತ್ತು ಕಳ್ಳತನ, ದರೋಡೆಯ ಅಪರಾಧಕ್ಕೆ ಶಿಕ್ಷೆಗೊಳಗಾದವರ ಮಧ್ಯೆ ನಡೆದ ಘರ್ಷಣೆಯಲ್ಲಿ ಜೈಲಿನಲ್ಲಿನ ಕಾರ್ಯಾಗಾರಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವಳಿ ಪೌರತ್ವ ಹೊಂದಿರುವ ಇರಾನಿಯನ್ನರ ಸಹಿತ ಭದ್ರತೆಗೆ ಸಂಬಂಧಿಸಿದ ಕಾರಣದಿಂದ ಬಂಧನಕ್ಕೆ ಒಳಗಾದವರನ್ನು ಎವಿನ್ ಜೈಲಿನಲ್ಲಿ ಇರಿಸಲಾಗಿದೆ.

ಜೈಲಿನಲ್ಲಿ ನಡೆದ ಘರ್ಷಣೆಗೂ ದೇಶದಲ್ಲಿ ಇತ್ತೀಚಿನ ಅಶಾಂತಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ, ಎವಿನ್ ಜೈಲಿನಲ್ಲಿ ತಪ್ಪಾಗಿ ಬಂಧನದಲ್ಲಿರುವ ಅಮೆರಿಕನ್ ಪ್ರಜೆಗಳ ಸುರಕ್ಷತೆಗೆ ಇರಾನ್ ಸಂಪೂರ್ಣ ಜವಾಬ್ದಾರವಾಗಿದೆ ಎಂದು ಅಮೆರಿಕ ಪ್ರತಿಕ್ರಿಯಿಸಿದೆ. ಘಟನೆಗೆ ಸಂಬಂಧಿಸಿ ಎವಿನ್ ಜೈಲಿನಿಂದ ತ್ವರಿತ ವರದಿಯನ್ನು ಅನುಸರಿಸುತ್ತಿದ್ದೇವೆ. ನಮ್ಮ ರಕ್ಷಣೆಯ ಶಕ್ತಿಯಾಗಿ ಸ್ವಿಝರ್‌ಲ್ಯಾಂಡ್ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News