×
Ad

ಚೀನಾದ ಸೇನೆಗೆ ತರಬೇತಿ ನೀಡದಂತೆ ನಿವೃತ್ತ ಪೈಲಟ್‍ಗಳಿಗೆ ಬ್ರಿಟನ್ ಎಚ್ಚರಿಕೆ

Update: 2022-10-18 21:11 IST
Photo : photo/twitter

ಬೀಜಿಂಗ್, ಅ.18: ತನ್ನ ಮಿಲಿಟರಿ ಸಿಬಂದಿಗಳಿಗೆ ತರಬೇತಿ ನೀಡಲು ಮಾಜಿ ಮತ್ತು ಈಗ ಸೇವೆ ಸಲ್ಲಿಸುತ್ತಿರುವ ಬ್ರಿಟನ್ ವಾಯುಪಡೆ(air force)ಯ ಪೈಲಟ್‍ಗಳನ್ನು ನೇಮಕಾತಿ ಮಾಡಿಕೊಳ್ಳುವ ಚೀನಾದ ಪ್ರಯತ್ನದ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಬ್ರಿಟನ್ ಸರಕಾರ(British Govt) ಮಂಗಳವಾರ ಹೇಳಿದೆ. 

ಬ್ರಿಟನ್‍ನ ಸುಮಾರು 30 ನಿವೃತ್ತ ಪೈಲಟ್‍ಗಳು ಚೀನಾದ ಸೇನೆಗೆ ತರಬೇತಿ ನೀಡುತ್ತಿದ್ದಾರೆ ಎಂಬ ಬಿಬಿಸಿ ವರದಿಯ ಹಿನ್ನೆಲೆಯಲ್ಲಿ ಚೀನಾದ ಸೇನೆಯ ಪರವಾಗಿ ಕಾರ್ಯ ನಿರ್ವಹಿಸದಂತೆ ಬ್ರಿಟನ್  ಎಚ್ಚರಿಕೆ ಸಂದೇಶ ರವಾನಿಸಿದೆ. ಬ್ರಿಟಿಷ್ ಮಿಲಿಟರಿ ಸಿಬಂದಿ ಆಗಾಗ್ಗೆ ವಿದೇಶಿ ಸೈನ್ಯಗಳೊಂದಿಗೆ ತರಬೇತಿ ಮತ್ತು ಕವಾಯತಿನಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ನಿವೃತ್ತ ಪೈಲಟ್‍ಗಳು ಚೀನಾದೊಂದಿಗೆ ಮಾಡಿಕೊಳ್ಳುವ ಯಾವುದೇ ಒಪ್ಪಂದವು ಬ್ರಿಟನ್‍ನ ಮತ್ತು ಜಾಗತಿಕ ಭದ್ರತೆಗೆ `ನಂಬರ್ ವನ್' ಬೆದರಿಕೆಯಾಗಿದೆ.

ಚೀನಾದ ಸೇನಾ ಸಿಬಂದಿಗೆ ತರಬೇತಿ ನೀಡಲು ಬ್ರಿಟನ್‍ನ ಹಾಲಿ ಮತ್ತು ನಿವೃತ್ತ ಪೈಲಟ್‍ಗಳನ್ನು ನೇಮಿಸಿಕೊಳ್ಳುವ ಯೋಜನೆಯ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬ್ರಿಟನ್ ರಕ್ಷಣಾ ಸಚಿವಾಲಯದ ವಕ್ತಾರರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಚೀನಾದ ಸೇನಾಸಿಬಂದಿಗೆ ತಮ್ಮ ಅನುಭವ, ಪರಿಣತಿಯನ್ನು ರವಾನಿಸಲು ಭಾರೀ ಮೊತ್ತದ ಹಣದೊಂದಿಗೆ ಆಮಿಷ ಒಡ್ಡಲಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ಈ ರೀತಿಯ ನೇಮಕಾತಿ ಪ್ರಕ್ರಿಯೆ ಹೆಚ್ಚಿದೆ. ತರಬೇತಿ ನೀಡುವುದು ಅಥವಾ ಪೈಲಟ್‍ಗಳನ್ನು ನೇಮಕಾತಿ ಮಾಡಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿಲ್ಲ. ಆದರೆ ಪಾಶ್ಚಿಮಾತ್ಯ ವಿಮಾನಗಳು ಮತ್ತು ಪೈಲಟ್‍ಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿದುಕೊಂಡು, ಆ ಮಾಹಿತಿಯನ್ನು ತೈವಾನ್‍ನಂತಹ ಘರ್ಷಣೆಯ ಸಂದರ್ಭ ಬಳಸಿಕೊಳ್ಳುವುದು ಚೀನಾದ ಉದ್ದೇಶವಾಗಿದೆ.

ಇದರಿಂದ ಬ್ರಿಟನ್‍ನ ಹಾಗೂ ಅಂತರಾಷ್ಟ್ರೀಯ ಭದ್ರತೆಗೆ ಅಪಾಯದ ಸಾಧ್ಯತೆ ಇರುವುದರಿಂದ ಇಂತಹ ಪ್ರಯತ್ನಗಳನ್ನು ತಡೆಯಲಾಗುತ್ತಿದೆ. ಜಾಗ್ವಾರ್‍ನಂತಹ ಆಧುನಿಕ  ಯುದ್ಧವಿಮಾನ, ಹೆಲಿಕಾಪ್ಟರ್‍ಗಳ ಚಾಲನೆಯಲ್ಲಿ ನಿಪುಣವಾಗಿರುವ, ಬ್ರಿಟನ್ ಸೇನೆಯ ಎಲ್ಲಾ ವಿಭಾಗಗಳಲ್ಲೂ ಕಾರ್ಯನಿರ್ವಹಿಸಿದ ಅನುಭವಿ ಪೈಲಟ್‍ಗಳನ್ನು ಚೀನಾ ಸಂಪರ್ಕಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News