ಆಕ್ರಮಣಕಾರಿ ರಾಜತಾಂತ್ರಿಕತೆ ಮುಂದುವರಿಕೆ: ಚೀನಾ

Update: 2022-10-20 16:46 GMT

ಬೀಜಿಂಗ್, ಅ.20: ಚೀನಾದ ಸಾರ್ವಭೌಮತೆ ಮತ್ತು ಭದ್ರತೆಯನ್ನು ರಕ್ಷಿಸಲು ತನ್ನ ರಾಜತಾಂತ್ರಿಕರು ಹೋರಾಟದ ಮನೋಭಾವ ಮತ್ತು ಹೋರಾಟದ ಧೈರ್ಯವನ್ನು ಪ್ರದರ್ಶಿಸುತ್ತಾರೆ ಎಂದು ಚೀನಾ ಗುರುವಾರ ಹೇಳಿದ್ದು ಇದರೊಂದಿಗೆ ದೇಶದ ಆಕ್ರಮಣಕಾರಿ ಮತ್ತು ವಿವಾದಾತ್ಮಕ ಶೈಲಿಯ `ತೋಳ ಯೋಧ(``Wolf warrior)(ವೂಲ್ಫ್ ವಾರಿಯರ್)' ರಾಜತಾಂತ್ರಿಕತೆ ಮುಂಬರುವ ದಿನಗಳಲ್ಲೂ ಮುಂದುವರಿಯುವ ಸೂಚನೆ ನೀಡಿದೆ.

`ಹೋರಾಡಲು ಧೈರ್ಯ ಮತ್ತು ಹೋರಾಟದಲ್ಲಿ ಸರ್ವೋತ್ತಮ'('Courage to fight and excellence in fighting') ಎಂಬುದು  ಚೀನಾ ರಾಜತಾಂತ್ರಿಕತೆಯ ಉತ್ತಮ ಸಂಪ್ರದಾಯ ಮತ್ತು ಆಧ್ಯಾತ್ಮಿಕ ಗುಣಲಕ್ಷಣಗಳಾಗಿವೆ ಎಂದು ಗುರುವಾರ ಆಡಳಿತರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ)ದ ರಾಷ್ಟ್ರೀಯ ಅಧಿವೇಶನದ ನೇಪಥ್ಯದಲ್ಲಿ   ಚೀನಾದ ಸಹಾಯಕ ವಿದೇಶಾಂಗ ಸಚಿವ ಮಾ ಝವೋಕ್ಸು (Minister Ma Zhaoxu)ಹೇಳಿದ್ದಾರೆ.

ಚೀನಾದ ರಾಜತಾಂತ್ರಿಕತೆಯು ಹೋರಾಟದ ಮನೋಭಾವದ ಪ್ರದರ್ಶನವನ್ನು ಮುಂದುವರಿಸುತ್ತದೆ, ನಮ್ಮ ಹೋರಾಟದ ಸಾಮಥ್ರ್ಯವನ್ನು ಸುಧಾರಿಸುತ್ತದೆ ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿ ಮತ್ತು ಘನತೆಯನ್ನು ರಕ್ಷಿಸಲು ಯಾವತ್ತೂ ಮುಂಚೂಣಿಯಲ್ಲಿ ಸನ್ನದ್ಧವಾಗಿ ನಿಲ್ಲಲಿದೆ. ಚೀನೀ ರಾಷ್ಟ್ರದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಹಾಗೂ ಮೂಲಭೂತ ಹಿತಾಸಕ್ತಿಗಳನ್ನು ಕಾಪಾಡುವ ನಮ್ಮ ಸಂಕಲ್ಪವು ಕಠಿಣ ಮತ್ತು ಅಚಲವಾಗಿರುತ್ತದೆ ಎಂದವರು ಹೇಳಿದ್ದಾರೆ.

ಚೀನಾವು ಅಭಿವೃದ್ಧಿಯ ಕಾಲವನ್ನು ಪ್ರವೇಶಿಸಿದ್ದು ಇಲ್ಲಿ ಕಾರ್ಯತಂತ್ರದ ಅವಕಾಶಗಳು, ಅಪಾಯ ಮತ್ತು ಸವಾಲುಗಳು ಏಕಕಾಲೀನವಾಗಿದೆ ಮತ್ತು ಅನಿಶ್ಚಿತತೆ ಹಾಗೂ ಅನಿರೀಕ್ಷಿತ ಅಂಶಗಳು ಹೆಚ್ಚುತ್ತಿವೆ. ಚೀನಾದ ರಾಜತಾಂತ್ರಿಕ ವಿಭಾಗವು  ಜನರ ಇಚ್ಛೆ, ಧೈರ್ಯ ಮತ್ತು ವಿಶ್ವಾಸವನ್ನು ಹೆಚ್ಚಿಸಲು ಹೋರಾಟದ ಮನೋಭಾವವನ್ನು ಮುಂದುವರಿಸಲಿದೆ. ಯಾವುದೇ ಒತ್ತಡ ಅಥವಾ ನಿಯಂತ್ರಣದಿಂದ ದೂರವಿದ್ದು ದೇಶದ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿಯ ಹಿತಾಸಕ್ತಿಗಳನ್ನು ಕಾಪಾಡಲು ಶ್ರಮಿಸಬೇಕಿದೆ ಎಂದು ಮಾ ಝವೋಕ್ಸುರನ್ನು ಉಲ್ಲೇಖಿಸಿ ಚೀನಾದ ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News