ರಶ್ಯದ ಜತೆ ಸಂಪರ್ಕದ ಆರೋಪ: ಉಕ್ರೇನ್ ನ ಶ್ರೀಮಂತ ಉದ್ಯಮಿ ಬಂಧನ

Update: 2022-10-23 17:15 GMT
PHOTO SOURCE: TWITTER

ಕೀವ್, ಅ.23: ದೇಶದ್ರೋಹದ ಆರೋಪದಲ್ಲಿ ಉಕ್ರೇನ್‌ನ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ, ವಿಮಾನಗಳ ಇಂಜಿನ್ ಹಾಗೂ ಕೈಗಾರಿಕಾ ಟರ್ಬೈನ್ ಉತ್ಪಾದಿಸುವ ಸಂಸ್ಥೆಯ ಮಾಲಕ ವ್ಯಚಸ್ಲೇವ್ ಬೊಗುಸ್ಲಯೆವ್‌ರನ್ನು ಬಂಧಿಸಿರುವುದಾಗಿ ಉಕ್ರೇನ್‌ನ ಮಾಧ್ಯಮಗಳು ವರದಿ ಮಾಡಿವೆ.

ರಶ್ಯ ಪರ ನಿಲುವು ಹೊಂದಿರುವ 83 ವರ್ಷದ ಬೊಗುಸ್ಲಯೆವ್‌ರ ಮೇಲೆ ಉಕ್ರೇನ್‌ನ ಭದ್ರತಾ ಪಡೆಗಳು ಕಣ್ಣಿರಿಸಿದ್ದವು. ರಶ್ಯಕ್ಕೆ ವಿಮಾನಗಳ ಇಂಜಿನ್‌ಗಳನ್ನು ಮಾರಾಟ ಮಾಡಿದ ಆರೋಪ ಅವರ ಮೇಲಿದ್ದು ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆಗೆ ಒಳಗಾಗಲಿದ್ದಾರೆ. ಝಪರೋಝಿಯಾದಲ್ಲಿರುವ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆಗೆ ಉಕ್ರೇನ್ ಅಧಿಕಾರಿಗಳು ತೆರಳಿದಾಗ ಅವರು ಬಾಗಿಲು ತೆರೆಯಲು ನಿರಾಕರಿಸಿದ್ದಾರೆ. ಬಳಿಕ ಬಾಗಿಲನ್ನು ಒಡೆದು ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಕ್ರೇನ್ ಯುದ್ಧ ಆರಂಭಕ್ಕೂ ಮುನ್ನ ರಶ್ಯಕ್ಕೆ ಪಲಾಯನ ಮಾಡಲು ಯತ್ನಿಸಿದ್ದ ಉಕ್ರೇನ್ ರಾಜಕಾರಣಿ ಮತ್ತು ಉದ್ಯಮಿ ವಿಕ್ಟರ್ ಮೆಡ್ವೆಡ್‌ಚುಕ್‌ರನ್ನು ಇದೇ ರೀತಿ ಬಂಧಿಸಲಾಗಿತ್ತು.

ಉಕ್ರೇನ್: ರಶ್ಯದ ವಾಯುದಾಳಿ 1 ಲಕ್ಷ ಟನ್ ತೈಲವಿದ್ದ ಡಿಪೊ ನಾಶ

ಮಾಸ್ಕೊ, ಅ.23: ಕೇಂದ್ರ ಉಕ್ರೇನ್‌ನಲ್ಲಿ 1 ಲಕ್ಷ ಟನ್‌ಗಳಿಗೂ ಹೆಚ್ಚಿನ ವಾಯುಯಾನ ಇಂಧನ ಸಂಗ್ರಹಿಸಿಟ್ಟಿದ್ದ ತೈಲ ಡಿಪೊವನ್ನು ನಾಶಗೊಳಿಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ರವಿವಾರ ಹೇಳಿದೆ.

 ಚೆರ್ಕಾಸಿ ವಲಯದಲ್ಲಿನ ಸ್ಮಿಲಾ ಗ್ರಾಮದಲ್ಲಿದ್ದ, ಉಕ್ರೇನ್ ವಾಯುಪಡೆಯ ಬಳಕೆಗಾಗಿ 1 ಲಕ್ಷ ಟನ್‌ಗೂ ಅಧಿಕ ವಾಯುಯಾನ ಇಂಧನ ಸಂಗ್ರಹಿಸಿದ್ದ ಡಿಪೊವನ್ನು ವಾಯುದಾಳಿಯಲ್ಲಿ ನಾಶಗೊಳಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಮಧ್ಯೆ, ಉಕ್ರೇನ್‌ನಿಂದ ಸ್ವಾಧೀನ ಪಡಿಸಿಕೊಂಡಿರುವ ಖೆರ್ಸಾನ್ ನಗರದಿಂದ ತನ್ನ ಅಧಿಕಾರಿಗಳನ್ನು ರಶ್ಯದ ರಕ್ಷಣಾ ಪಡೆ ವಾಪಾಸು ಕರೆಸಿಕೊಳ್ಳುತ್ತಿದೆ. ಉಕ್ರೇನ್‌ನ ಸೇನೆ ಈ ನಗರದತ್ತ ಮುನ್ನುಗ್ಗಿ ಬರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಶ್ಯ ಈ ಪ್ರಕ್ರಿಯೆ ಆರಂಭಿಸಿದೆ. ಈ ನಗರದಲ್ಲಿ ರಶ್ಯವು ಹೊಸದಾಗಿ ನೇಮಕಗೊಳಿಸಿರುವ ಮೀಸಲು ಯೋಧರ ಪಡೆಯನ್ನು ನಿಯೋಜಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News