ಹಫೀಝ್ ಸಯೀದ್ ಪುತ್ರನನ್ನು ಉಗ್ರರ ಪಟ್ಟಿಗೆ ಸೇರಿಸಲು ಚೀನಾ ಮತ್ತೆ ತಡೆ
Update: 2022-10-24 23:14 IST
ನ್ಯೂಯಾರ್ಕ್, ಅ.24: ಲಷ್ಕರೆ ತೈಯಬ್ಬ(ಎಲ್‌ಇಟಿ)ದ ಮುಖ್ಯಸ್ಥ ಹಫೀಝ್ ಸಯೀದ್ (Hafiz Saeed)ಪುತ್ರ ತಲ್ಹಾ ಸಯೀದ್‌ನನ್ನು ವಿಶ್ವಸಂಸ್ಥೆಯ ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಭಾರತ ಮತ್ತು ಅಮೆರಿಕದ ಪ್ರಸ್ತಾವನೆಗೆ ವಿಶ್ವಸಂಸ್ಥೆಯಲ್ಲಿ ಚೀನಾ ಮತ್ತೆ ತಡೆಯೊಡ್ಡಿದೆ.
ಪಾಕ್ ಮೂಲದ ಉಗ್ರರನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಈ ವರ್ಷ ಐದನೇ ಬಾರಿಗೆ ಚೀನಾ ತಡೆಯೊಡ್ಡಿದಂತಾಗಿದೆ.
ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ಪ್ರಕರಣದ ರೂವಾರಿ ಹಫೀಝ್ ಸಯೀದ್‌ನ ಪುತ್ರನನ್ನು ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯಲ್ಲಿ ಭಾರತ ಮಂಡಿಸಿದ್ದು ಅದನ್ನು ಅಮೆರಿಕ ಅನುಮೋದಿಸಿತ್ತು. ಆದರೆ ಚೀನಾ ತಡೆಯೊಡ್ಡಿದೆ. ಇದಕ್ಕೂ ಮುನ್ನ, ಮತ್ತೊಬ್ಬ ಎಲ್‌ಇಟಿ ಸದಸ್ಯ ಶಾಹಿದ್ ಮಹ್ಮೂದ್(Shahid Mahmood)ನನ್ನು ಜಾಗತಿಕ ಭಯೋತ್ಪಾದಕ ಎಂದು ಗುರುತಿಸುವ ಪ್ರಸ್ತಾವನೆ ವಿಶ್ವಸಂಸ್ಥೆಯಲ್ಲಿ ಅಂಗೀಕರಿಸಲ್ಪಟ್ಟಿದೆ ಎಂದು ವರದಿಯಾಗಿದೆ.