ರಿಷಿ ಸುನಕ್ ನೂತನ ಸಂಪುಟ: ಹಲವರಿಗೆ ಕೊಕ್, ಕೆಲವರ ಮರು ನೇಮಕ

Update: 2022-10-26 02:47 GMT
ರಿಷಿ ಸುನಕ್

ಲಂಡನ್: ಮಾಜಿ ಪ್ರಧಾನಿ ಲಿಝ್ ಟ್ರಸ್ (Liz Truss) ಅವರ ಸಂಪುಟದಲ್ಲಿದ್ದ ಹಲವು ಮಂದಿ ಸಹೋದ್ಯೋಗಿಗಳಿಗೆ ನೂತನ ಪ್ರಧಾನಿ ರಿಷಿ ಸುನಕ್ (Prime Minister of the UK, Rishi Sunak) ಕೊಕ್ ನೀಡಿದ್ದಾರೆ. ಕೆಲವು ಮಂದಿಯನ್ನು ಮಾತ್ರವೇ ನೂತನ ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.

ಪ್ರಧಾನಿಯಾಗಿ ಮಾಡಿದ ಮೊದಲ ಭಾಷಣದಲ್ಲಿ ಸುನಕ್, "ನಾನು ಪಕ್ಷದ ಮುಖಂಡನಾಗಿ ಆಯ್ಕೆಯಾಗಿದ್ದೇನೆ ಮತ್ತು ಪ್ರಮಾದಗಳನ್ನು ಸರಿಪಡಿಸುವ ಸಲುವಾಗಿ ಇದೀಗ ನಿಮ್ಮ ಪ್ರಧಾನಿಯಾಗಿದ್ದೇನೆ. ಈ ಕೆಲಸ ತಕ್ಷಣದಿಂದಲೇ ಆರಂಭವಾಗಲಿದೆ" ಎಂದು ಹೇಳಿದ್ದಾರೆ.

ಬ್ರಿಟನ್ ಖಜಾನೆಯ ಚಾನ್ಸ್‌ಲರ್ ಆಗಿ ಜೆರೆಮಿ ಹಂಟ್ (Jeremy Hunt, Chancellor of the Exchequer of the UK) ಅವರನ್ನು ಸುನಕ್ ಮರು ನೇಮಕ ಮಾಡಿದ್ದಾರೆ. ಖ್ವಾಸಿ ಕ್ವರ್ಟೆಂಗ್ (Kwasi Kwarteng) ಅವರನ್ನು ವಜಾಗೊಳಿಸಿದ ಬಳಿಕ ಲಿಝ್ ಟ್ರುಸ್, ಹಂಟ್ ಅವರನ್ನು ಆಯ್ಕೆ ಮಾಡಿದ್ದರು.

ಜೇಮ್ಸ್ ಕ್ಲೆವರ್ಲಿ ಅವರನ್ನು ವಿದೇಶಾಂಗ (James Cleverly, Secretary of State for Foreign), ಕಾಮನ್ವೆಲ್ತ್ ಮತ್ತು ಅಭಿವೃದ್ದಿ ವ್ಯವಹಾರಗಳ ಕಾರ್ಯದರ್ಶಿಯಾಗಿ ಮರು ಆಯ್ಕೆ ಮಾಡಲಾಗಿದೆ. ರಕ್ಷಣಾ ಕಾರ್ಯದರ್ಶಿ ಬೆಲ್ ವೆಲ್ಲೆಸ್ ಅವರನ್ನೂ ಸುನಕ್ ಉಳಿಸಿಕೊಂಡಿದ್ದಾರೆ.

ಲಾರ್ಡ್ ಪ್ರಸಿಡೆಂಟ್ ಆಫ್ ಕೌನ್ಸಿಲ್ ಆಗಿ ಮತ್ತು ಹೌಸ್ ಆಫ್ ಕಾಮನ್ಸ್ ಮುಖಂಡರಾಗಿ ಪ್ರತಿಸ್ಪರ್ಧಿ ಪೆನ್ನಿ ಮಾರ್ಡಂಟ್ ಅವರನ್ನು ಉಳಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದ ಭಾರತೀಯ ಮೂಲದ ಸ್ಯುಯೆಲ್ಲಾ ಬ್ರೆವರ್‍ಮನ್ ಮತ್ತೆ ಗೃಹ ಕಾರ್ಯದರ್ಶಿಯಾಗಿ ವಾಪಸ್ಸಾಗಿದ್ದಾರೆ. ಟ್ರುಸ್ ಅವಧಿಯಲ್ಲೂ ಅವರು ಇದೇ ಹುದ್ದೆಯಲ್ಲಿದ್ದರು.

ಉಪ ಪ್ರಧಾನಿ, ಲಾರ್ಡ್ ಚಾನ್ಸ್‌ಲರ್ ಮತ್ತು ನ್ಯಾಯಾಂಗ ಕಾರ್ಯದರ್ಶಿಯಾಗಿ ಡೊಮಿನಿಕ್ ರಾಬ್ ನೇಮಕಗೊಂಡಿದ್ದಾರೆ. ಖಜಾನೆಯ ಸಂಸದೀಯ ಕಾರ್ಯದರ್ಶಿಯಾಗಿ (ಮುಖ್ಯ ಸಚೇತಕ) ಸೈಮನ್ ಹರ್ಟ್ ನೇಮಕಗೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News