ಕೆನಡ: ಖಲಿಸ್ತಾನ ಬೆಂಬಲಿಗರು, ಭಾರತೀಯರ ಮಧ್ಯೆ ಘರ್ಷಣೆ
ಟೊರಂಟೊ, ಅ.28: ಕೆನಡಾ(Canada)ದ ಮಿಸಿಸಾವುಗ ನಗರದಲ್ಲಿ ಸೋಮವಾರ ಸಂಜೆ ದೀಪಾವಳಿ ಸಂಭ್ರಮಾಚರಣೆ ಸಂದರ್ಭ ಖಲಿಸ್ತಾನ(Khalistan) ಪರ ಮೂಲಭೂತವಾದಿಗಳು ಹಾಗೂ ತ್ರಿವರ್ಣ ಧ್ವಜ (tricolor flag)ಹಿಡಿದಿದ್ದ ಭಾರತೀಯರ ಮಧ್ಯೆ ಘರ್ಷಣೆ ಸಂಭವಿಸಿದ್ದು ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನಗರದ ಮಾಲ್ಟನ್ ಪ್ರದೇಶದಲ್ಲಿ ಘರ್ಷಣೆ ನಡೆದಿದ್ದು ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿದ್ದಾರೆ. ಭಾರತೀಯ ಧ್ವಜವನ್ನು ಬೀಸುತ್ತಿದ್ದ ಒಂದು ಗುಂಪು ಮತ್ತು ಖಲಿಸ್ತಾನ ಜನಾಭಿಪ್ರಾಯ ಸಂಗ್ರಹಣೆಯನ್ನು ಬೆಂಬಲಿಸುವ ಬ್ಯಾನರನ್ನು ಪ್ರದರ್ಶಿಸುತ್ತಿತ್ತು. ಘರ್ಷಣೆ ನಿರತ ಗುಂಪನ್ನು ಪೊಲೀಸರು ಚದುರಿಸಿದ್ದು ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೆನಡಾದಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿಗಳ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಭಾರತ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದು, ಒಂಟಾರಿಯೊದಲ್ಲಿ ನವೆಂಬರ್ 6ರಂದು ಭಾರತ ವಿರೋಧಿ ಶಕ್ತಿಗಳು ಹಮ್ಮಿಕೊಂಡಿರುವ ತಥಾಕಥಿತ `ಖಲಿಸ್ತಾನ ಜನಾಭಿಪ್ರಾಯ ಸಂಗ್ರಹಣೆ'ಯನ್ನು ತಡೆಯಬೇಕೆಂದು ಕೆನಡಾ ಸರಕಾರವನ್ನು ಆಗ್ರಹಿಸಿದೆ ಎಂದು ಕೆನಡ ಮೂಲದ ಗ್ಲೋಬಲ್ ನ್ಯೂಸ್ ವರದಿ ಮಾಡಿದೆ.
ಈ ಕುರಿತ ನಮ್ಮ ಆಕ್ಷೇಪವನ್ನು ಭಾರತದಲ್ಲಿರುವ ಕೆನಡಾ ಹೈಕಮಿಷನ್ ಕಚೇರಿಗೆ ಹಾಗೂ ಕೆನಡಾದಲ್ಲಿನ ಉನ್ನತ ಅಧಿಕಾರಿಗಳಿಗೆ ರವಾನಿಸಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವಾಲದ ವಕ್ತಾರ ಅರೀಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.