ತಕ್ಷಣ ಚುನಾವಣೆಗೆ ಆಗ್ರಹಿಸಿ ಇಮ್ರಾನ್ ಖಾನ್ ಜಾಥಾ
ಲಾಹೋರ್, ಅ.28: ದೇಶದಲ್ಲಿ ತಕ್ಷಣ ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಆಯೋಜಿಸಿರುವ ದೀರ್ಘ ಜಾಥಾಕ್ಕೆ ಶುಕ್ರವಾರ ಚಾಲನೆ ದೊರಕಿದೆ.
ಲಾಹೋರ್ನಿಂದ ಇಸ್ಲಾಮಾಬಾದ್(Islamabad)ವರೆಗೆ ಸುಮಾರು 380 ಕಿ.ಮೀ ದೂರ ನಡೆಯಲಿರುವ ವಾಹನ ಜಾಥಾದಲ್ಲಿ ಇಮ್ರಾನ್ ಅವರ ಪಕ್ಷದ ಸದಸ್ಯರು, ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ. ದಾರಿಯ ಹಲವೆಡೆ ಸಭೆ, ಪ್ರತಿಭಟನೆ ನಡೆಸುವ ಮೂಲಕ ಹಾಲಿ ಸರಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಲಾಗುವುದು. ದೇಶದ ಹಣವನ್ನು ಲೂಟಿ ಮಾಡುತ್ತಿರುವವರಿಂದ ದೇಶವನ್ನು ರಕ್ಷಿಸಬೇಕಾಗಿದೆ ಎಂದು ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಹೇಳಿಕೆ ತಿಳಿಸಿದೆ.
ನಾನು ಬಂಧನಕ್ಕೆ ಹೆದರುವವನಲ್ಲ. ಜನತೆ ನ್ಯಾಯ ಮತ್ತು ಮುಕ್ತರೀತಿಯ ಚುನಾವಣೆಯನ್ನು ಬಯಸುತ್ತಿದ್ದಾರೆ. ಜನರ ಆಗ್ರಹಕ್ಕೆ ನಾವು ಧ್ವನಿಯಾಗುತ್ತಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಈ ಮಧ್ಯೆ, ಜಾಥಾದ ಹಿನ್ನೆಲೆಯಲ್ಲಿ ರಾಜಧಾನಿ ಇಸ್ಲಮಾಬಾದ್ನಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.