×
Ad

ಇಸ್ರೇಲಿ ಆಕ್ರಮಣದ ಬಗ್ಗೆ ಅಂತರಾಷ್ಟ್ರೀಯ ಮೌನ ಸರಿಯಲ್ಲ: ವಿಶ್ವಸಂಸ್ಥೆ ವರದಿ

Update: 2022-10-28 22:42 IST

ವಾಷಿಂಗ್ಟನ್, ಅ.28: ಪೆಲೆಸ್ತೀನ್ (Palestine )ಪ್ರದೇಶದ ಮೇಲಿನ ಇಸ್ರೇಲ್ನ ಆಕ್ರಮಣವು ಅಕ್ರಮವಾಗಿದೆ ಮತ್ತು ಈ ಬಗ್ಗೆ ಅಂತರಾಷ್ಟ್ರೀಯ ಮೌನವು ಅಂತರಾಷ್ಟ್ರೀಯ ಕಾನೂನನ್ನು ದುರ್ಬಲಗೊಳಿಸಿದೆ. ಪೆಲೆಸ್ತೀನೀಯರು ತಮ್ಮ ಸ್ವನಿರ್ಣಯದ ಹಕ್ಕನ್ನು ಚಲಾಯಿಸುವುದಕ್ಕೂ ಮುನ್ನ ಇದು ಕೊನೆಗೊಳ್ಳಬೇಕು  ಎಂದು ಗುರುವಾರ ಬಿಡುಗಡೆಗೊಂಡಿರುವ ವಿಶ್ವಸಂಸ್ಥೆ(HWO)ಯ ವರದಿ ಹೇಳಿದೆ.

ಇಸ್ರೇಲಿ ಆಕ್ರಮಣಕ್ಕೆ ಸಂಬಂಧಿಸಿ ಸರಿಯಾದ ವಿಧಾನ ಮತ್ತು ಸರಿಯಾದ ಭಾಷೆಯ ಬಳಕೆ ಹಾಗೂ ಪೆಲೆಸ್ತೀನೀಯರ ಸ್ವ-ನಿರ್ಣಯದ ಹಕ್ಕನ್ನು ಬೆಂಬಲಿಸಬೇಕು ಎಂದು ವರದಿಯ ಲೇಖಕಿ ಹಾಗೂ 1967ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪೆಲೆಸ್ತೀನ್ ಪ್ರದೇಶದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಫ್ರಾನ್ಸೆಸ್ಕಾ ಅಲ್ಬನೀಸ್ ಕರೆ ನೀಡಿದ್ದಾರೆ. ನ್ಯೂಯಾರ್ಕ್ ನ `ಫಾರಿನ್ ಪ್ರೆಸ್ ಅಸೋಸಿಯೇಷನ್'ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವರದಿ ಸಮಗ್ರವಾಗಿದೆ ಮತ್ತು ಅಂತರಾಷ್ಟ್ರೀಯ ಕಾನೂನಿನ ಸಮಸ್ಯೆಗಳಿಗೆ ಸಮಗ್ರ ಅನುಸಂಧಾನದ ಬಗ್ಗೆ ಗಮನ ಹರಿಸಿದೆ.   ಇದು ಇಸ್ರೇಲ್ ಮತ್ತು ಪೆಲೆಸ್ತೀನ್ ನಡುವಿನ ʼಸಂಘರ್ಷ'(``conflict''')ದ ನಿರೂಪಣೆಯನ್ನು ವಿಭಿನ್ನ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಿದೆ ಮತ್ತು ಇಸ್ರೇಲ್ನ ʼಉದ್ದೇಶಪೂರ್ವಕ ಸ್ವಾಧೀನಪಡಿಸಿಕೊಳ್ಳುವ, ಪ್ರತ್ಯೇಕತಾವಾದಿ ಮತ್ತು ದಮನಕಾರಿ ವಸಾಹತುಗಾರ- ವಸಾಹತುಶಾಹಿ ಆಕ್ರಮಣವನ್ನು' ಗುರುತಿಸಿದೆ  ಎಂದು ಹೇಳಿದ್ದಾರೆ.

ಇಸ್ರೇಲ್ನ ಆಕ್ರಮಣದ ವಿಷಯದಲ್ಲಿ ಅಂತರಾಷ್ಟ್ರೀಯ ಸಮುದಾಯದ ಮೌನ ಪ್ರಶ್ನಾರ್ಹವಾಗಿದೆ. 55 ವರ್ಷದ ಕ್ರೌರ್ಯ, ಆಕ್ರಮಣ ಮತ್ತು ದಮನಕಾರಿ ಕೃತ್ಯದ ಬಗ್ಗೆ  ಇನ್ನೂ ಯಾಕೆ ತುಟಿ ಬಿಚ್ಚುತ್ತಿಲ್ಲ. ಇಸ್ರೇಲ್ ಅಧಿಕಾರಿಗಳಿಗೆ, ನಿರ್ದಿಷ್ಟವಾಗಿ ಪಾಶ್ಚಿಮಾತ್ಯ ದೇಶಗಳಿಂದ  ನೀಡಲಾಗಿರುವ ಈ ʼವಿನಾಯಿತಿ' ಅಂತರಾಷ್ಟ್ರೀಯ ಕಾನೂನಿನ ಬಲವನ್ನು ದುರ್ಬಲಗೊಳಿಸಿದೆ, ನಕಾರಾತ್ಮಕ ಪೂರ್ವನಿದರ್ಶನವನ್ನು ಸ್ಥಾಪಿಸಿದೆ ಮತ್ತು ನಿಯಮಿತವಾಗಿ ಅಂತರಾಷ್ಟ್ರೀಯ ಕಾನೂನನ್ನು ಧಿಕ್ಕರಿಸಿ ಕಾರ್ಯನಿರ್ವಹಿಸಲು ಇತರರನ್ನೂ ಉತ್ತೇಜಿಸಿದೆ ಎಂದವರು ಹೇಳಿದ್ದಾರೆ.

ಪೆಲೆಸ್ತೀನೀಯರ ಬದುಕಿನ ವಾಸ್ತವತೆಯನ್ನು ಗುರುತಿಸುವುದಕ್ಕೆ ಪಾಶ್ಚಿಮಾತ್ಯ ದೇಶಗಳ ಆಕ್ಷೇಪ ಮತ್ತು ಇಸ್ರೇಲ್ನಿಂದ ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯನ್ನು ಟೀಕಿಸಿದ ಅವರು, ಇಸ್ರೇಲ್ನ ಆಕ್ರಮಣ ಮತ್ತು ಕೃತ್ಯಗಳನ್ನು ಬೆಂಬಲಿಸುವ ಪಾಶ್ಚಿಮಾತ್ಯ ದೇಶಗಳ ವರ್ತನೆ `ಸಹೋದರತ್ವ ಮತ್ತು ರಕ್ಷಣಾವಾದದ' ಪ್ರಕ್ರಿಯೆಯಾಗಿದೆ ಎಂದು ಬಣ್ಣಿಸಿದರು.

ಪ್ರಗತಿಯ ವಿಷಯದಲ್ಲಿ ನಾವಿನ್ನೂ ಶೂನ್ಯದಲ್ಲಿದ್ದೇವೆ ಮತ್ತು ಆಕ್ರಮಣವು ಇನ್ನಷ್ಟು ಹೆಚ್ಚುತ್ತಿದೆ. ಆದರೆ ಇದು ಶಾಶ್ವತವಲ್ಲ, ಇದಕ್ಕೆ ಅಂತ್ಯವಿದೆ ಎಂಬ ವಿಶ್ವಾಸ ನನಗಿದೆ ಎಂದವರು ಹೇಳಿದ್ದಾರೆ. ಇಸ್ರೇಲ್ ಆಕ್ರಮಣವು ವರ್ಣಭೇದ ನೀತಿಯ ಕಾನೂನಿನ ಮಿತಿಯೊಳಗೆ ಬರುತ್ತದೆ ಎಂಬ ಪರಿಕಲ್ಪನೆಯು ವೇಗ ಪಡೆಯುತ್ತಿದೆ. ಆದರೆ ಇಸ್ರೇಲ್ ಆಕ್ರಮಣದ ಅಡಿಯಲ್ಲಿರುವ ಪೆಲೆಸ್ತೀನೀಯರ ಬದುಕನ್ನು ವರ್ಣಭೇದ ನೀತಿಗೆ ಮಾತ್ರ ಹೋಲಿಸಲಾಗದು. ವರ್ಣಭೇದ ನೀತಿಯ ಪರಿಕಲ್ಪನೆಯನ್ನು ಮಾತ್ರ ಬಳಸುವುದರಿಂದ ಪೆಲೆಸ್ತೀನ್ ಪ್ರದೇಶದ ಮೇಲಿನ ಇಸ್ರೇಲಿ ಆಕ್ರಮಣದ ಅಂತರ್ಗತ ಅಕ್ರಮವನ್ನು ತಪ್ಪಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಸ್ರೇಲ್ನ ವರ್ಣಭೇದ ನೀತಿಯನ್ನು ಗುರುತಿಸುವ ಪ್ರಕ್ರಿಯೆ  ಸಮಗ್ರ ಪೆಲೆಸ್ತೀನೀಯರ (1947-49ರಲ್ಲಿ ಸ್ಥಳಾಂತರಗೊಂಡವರು, ಹೊರಹಾಕಲ್ಪಟ್ಟವರು ಸೇರಿದಂತೆ) ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಬೇಕು. ಅಂತರಾಷ್ಟ್ರೀಯ ಸಮುದಾಯವು ಇಸ್ರೇಲ್ನ ಆಕ್ರಮಣವನ್ನು ಗುರುತಿಸಿ ಖಂಡಿಸಬೇಕು ಮತ್ತು ಈ ಸಮಸ್ಯೆ ತಕ್ಷಣ ಅಂತ್ಯಗೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಆಗ್ರಹಿಸಲಾಗಿದೆ.

ವರ್ಣಭೇದ ನೀತಿಗೆ ಸಮ

ಪೆಲೆಸ್ತೀನ್ ನಾಗರಿಕರನ್ನು ಇಸ್ರೇಲ್ ಅಧಿಕಾರಿಗಳು ನಡೆಸಿಕೊಳ್ಳುತ್ತಿರುವ ರೀತಿ ವರ್ಣಭೇದ ನೀತಿಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ  ಫ್ರಾನ್ಸೆಸ್ಕಾ ಅಲ್ಬನೀಸ್ ` ಪ್ರತಿಷ್ಠಿತ ವಿದ್ವಾಂಸರು ಮತ್ತು ಸಂಸ್ಥೆಗಳ ಇತ್ತೀಚಿನ ಅಧ್ಯಯನಗಳು,  ಪೆಲೆಸ್ತೀನಿಯರಿಗೆ  ಅನ್ವಯಿಸಲಾದ ವ್ಯವಸ್ಥಿತ ಮತ್ತು ವ್ಯಾಪಕವಾದ  ತಾರತಮ್ಯ ನೀತಿಗಳು ಮತ್ತು ಕ್ರಮಗಳು ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ವರ್ಣಭೇದ ನೀತಿಯ ಅಪರಾಧಕ್ಕೆ ಸಮನಾಗಿರುತ್ತದೆ ಎಂದು ತೀರ್ಮಾನಿಸಿವೆ  . ಅಂತರಾಷ್ಟ್ರೀಯ ಸಮುದಾಯ ಇನ್ನೂ ಈ ಬಗ್ಗೆ ಪೂರ್ಣವಾಗಿ ಕಾರ್ಯನಿರ್ವಹಿಸದಿದ್ದರೂ, ಈ ದೃಷ್ಟಿಕೋನದ ಸ್ವೀಕಾರ ನಿಧಾನವಾಗಿ ಹೆಚ್ಚುತ್ತಿದೆ' ಎಂದರು.

Similar News