ಟ್ವಿಟರ್‌ನ ಶೇ. 50 ಉದ್ಯೋಗ ಕಡಿತಗೊಳಿಸಲಿರುವ ಎಲಾನ್‌ ಮಸ್ಕ್‌: ವರದಿ

Update: 2022-11-03 08:41 GMT

ಕ್ಯಾಲಿಫೋರ್ನಿಯಾ: ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್‌ ಮಸ್ಕ್‌ (Elon Musk) ಈಗ ತಮ್ಮ ಒಡೆತನದಲ್ಲಿರುವ ಟ್ವಿಟರ್‌ನಲ್ಲಿ (Twitter) ಶೇ. 50 ರಷ್ಟು ಉದ್ಯೋಗಗಳನ್ನು ಕಡಿತ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆಂದು ತಿಳಿದು ಬಂದಿದೆ. ಈ ಕಾರಣ ಸಂಸ್ಥೆಯ ಸುಮಾರು 3,700 ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿದೆ. ಒಟ್ಟು 44 ಬಿಲಿಯನ್‌ ಡಾಲರ್‌ಗೆ ಟ್ವಿಟರ್‌ ಅನ್ನು ಖರೀದಿಸಿರುವ ಎಲಾನ್‌ ಮಸ್ಕ್‌ ಸಂಸ್ಥೆಯನ್ನು ನಿರ್ವಹಿಸುವ ವೆಚ್ಚಗಳನ್ನು ಕಡಿತ ಮಾಡುವ ಇಂಗಿತ ಹೊಂದಿದ್ದಾರೆಂದು ವರದಿಯಾಗಿದೆ.

ಉದ್ಯೋಗ ಕಳೆದುಕೊಳ್ಳುವ ಸಿಬ್ಬಂದಿಗೆ ಸಂಸ್ಥೆ ಶುಕ್ರವಾರ ಮಾಹಿತಿ ನೀಡುವ ನಿರೀಕ್ಷೆಯಿದೆ. ಟ್ವಿಟರ್‌ನ ಈಗಿನ ಎಲ್ಲಿಂದಲಾದರೂ ಕೆಲಸ ಮಾಡುವ ನೀತಿಯನ್ನು ಬದಲಾಯಿಸಿ ಎಲ್ಲರೂ ಕಚೇರಿಯಿಂದಲೇ ಕೆಲಸ ಮಾಡಬೇಕೆಂಬ ನೀತಿಯನ್ನು ಮಸ್ಕ್‌ ಜಾರಿಗೆ ತರುವ ಉದ್ದೇಶವನ್ನು ಹೊಂದಿದ್ದು, ಈ ನೀತಿಯಿಂದ ಕೆಲವರಿಗೆ ವಿನಾಯಿತಿ ದೊರೆಯಬಹುದೆಂದು ನಿರೀಕ್ಷಿಸಲಾಗಿದೆ.

ಉದ್ಯೋಗ ಕಡಿತದಿಂದ ಬಾಧಿತರಾಗುವ ಉದ್ಯೋಗಿಗಳಿಗೆ 60 ದಿನಗಳ ವೇತನ ಒದಗಿಸುವ ಕುರಿತೂ ಚಿಂತಿಸಲಾಗುತ್ತಿದೆ ಎನ್ನಲಾಗಿದೆ.

ಟ್ವಿಟರ್‌ ಅನ್ನು ಅದರ ಮೌಲ್ಯಕ್ಕಿಂತಲೂ ಹೆಚ್ಚಿನ ಬೆಲೆಗೆ ತಾವು ಖರೀದಿಸಿದ್ದಾಗಿ ಅಂದುಕೊಂಡಿರುವ ಮಸ್ಕ್‌ ಕಾರ್ಯನಿರ್ವಹಣಾ ವೆಚ್ಚಗಳನ್ನು ಇಳಿಸುವತ್ತ ಹೆಚ್ಚಿನ ಗಮನ ನೀಡಿದ್ದಾರೆ.

ಟ್ವಿಟರ್‌ನ ಈ ಹಿಂದಿನ ಸಿಇಒ ಪರಾಗ್‌ ಅಗರ್ವಾಲ್‌, ಹಣಕಾಸು ಮುಖ್ಯಸ್ಥ ನೆಡ್‌ ಸೆಗಲ್‌ ಮತ್ತು ಹಿರಿಯ ಕಾನೂನು ಅಧಿಕಾರಿ ವಿಜಯಾ ಗದ್ದೆ ಅವರನ್ನು ಮಸ್ಕ್‌ ಟ್ವಿಟರ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಿಗೇ ಕೆಲಸದಿಂದ ತೆಗೆದುಹಾಕಲಾಗಿದ್ದರೆ ನಂತರದ ಬೆಳವಣಿಗೆಯಲ್ಲಿ ಸಂಸ್ಥೆಯ ಹಲವು ಉನ್ನತಾಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ತೀವ್ರ ಮಟ್ಟಕ್ಕೆ ತಲುಪಿದ ದಿಲ್ಲಿ ವಾಯು ಮಾಲಿನ್ಯ; ಶಾಲೆಗಳಿಗೆ ರಜೆ ನೀಡುವಂತೆ ಪೋಷಕರ ಒತ್ತಾಯ

Similar News