ಜೈವಿಕ ಶಸ್ತ್ರಾಸ್ತ್ರಗಳ ತನಿಖೆ: ರಶ್ಯದ ಪ್ರಸ್ತಾವಕ್ಕೆ ವಿಶ್ವಸಂಸ್ಥೆ ನಕಾರ

Update: 2022-11-03 17:28 GMT

ವಿಶ್ವಸಂಸ್ಥೆ, ನ.3: ಉಕ್ರೇನ್ ಹಾಗೂ ಅಮೆರಿಕಗಳು ಮಿಲಿಟರಿ ಜೈವಿಕ (Military bio)ಚಟುವಟಿಕೆಯನ್ನು ನಡೆಸುತ್ತಿದ್ದು ಇದು ಜೈವಿಕ ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಷೇಧಿಸಿರುವ ನಿರ್ಣಯದ ಉಲ್ಲಂಘನೆಯಾಗಿದೆ. ಆದ್ದರಿಂದ ಈ ಬಗ್ಗೆ ತನಿಖೆಗಾಗಿ ಆಯೋಗವನ್ನು ರಚಿಸಬೇಕು ಎಂಬ ರಶ್ಯದ ಪ್ರಸ್ತಾವನೆಯನ್ನು ವಿಶ್ವಸಂಸ್ಥೆ(WHO) ಭದ್ರತಾ ಮಂಡಳಿ ಬಹುಮತದಿಂದ ತಿರಸ್ಕರಿಸಿದೆ.

   ಈ ಕುರಿತ ನಿರ್ಣಯವನ್ನು ಮತದಾನಕ್ಕೆ ಹಾಕಿದಾಗ ಚೀನಾ ಮಾತ್ರ ಬೆಂಬಲಿಸಿದೆ. ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, ಇತರ 10 ದೇಶಗಳು ಮತದಾನದಿಂದ ದೂರ ಉಳಿದವು. ನಿರ್ಣಯ ಅಂಗೀಕಾರಕ್ಕೆ ಕನಿಷ್ಟ 9 ಮತಗಳ ಅಗತ್ಯವಿದ್ದು ನಿರ್ಣಯವನ್ನು ತಿರಸ್ಕರಿಸಲಾಗಿದೆ ಎಂದು ಭದ್ರತಾ ಮಂಡಳಿ ಹೇಳಿದೆ.

2-3-10 ಮತಗಳು ಫೆಬ್ರವರಿ 24ರಿಂದ ಉಕ್ರೇನ್ ವಿರುದ್ಧ ರಶ್ಯದ ಕ್ರಮಗಳಿಗೆ ಭದ್ರತಾ ಮಂಡಳಿಯ ವಿರೋಧ ಮತ್ತು ಖಂಡನೆಯನ್ನು ಸೂಚಿಸುತ್ತದೆ. ಆದರೆ, ರಶ್ಯ ಮತ್ತು ಅದರ ಬೆಂಬಲಿಗ ದೇಶ ಚೀನಾಕ್ಕೆ ವೀಟೊ ಅಧಿಕಾರ ಇರುವುದರಿಂದ ರಶ್ಯದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಭದ್ರತಾ ಮಂಡಳಿಗೆ ಸಾಧ್ಯವಾಗುತ್ತಿಲ್ಲ.

 ಅಮೆರಿಕದ ರಕ್ಷಣಾ ಇಲಾಖೆಯ ನೆರವಿನೊಂದಿಗೆ ಉಕ್ರೇನ್ನ ಜೈವಿಕ ಪ್ರಯೋಗಾಲಯಗಳಲ್ಲಿ ಮಿಲಿಟರಿ ಜೈವಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸುವ ಹಾಗೂ ಈ ಕುರಿತ ವಿವರಣೆಯಿರುವ 310 ಪುಟಗಳ ಕರಡು ನಿರ್ಣಯವನ್ನು ರಶ್ಯ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರಿಗೆ ರವಾನಿಸಿತ್ತು. ನಿರ್ಣಯಕ್ಕೆ ಸೋಲಾದ ಬಳಿಕ ಪ್ರತಿಕ್ರಿಯಿಸಿರುವ ರಶ್ಯದ ಉಪ ರಾಯಭಾರಿ ಡಿಮಿಟ್ರಿ ಪೊಲ್ಯಾಂಸ್ಕಿ ‘ ರಶ್ಯ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಲು ಭದ್ರತಾ ಮಂಡಳಿಯ 15 ಸದಸ್ಯ ದೇಶಗಳ ಸದಸ್ಯರನ್ನು ಒಳಗೊಂಡ ಆಯೋಗ ರಚನೆಗೆ ಸಮಿತಿ ಸಕಾರಾತ್ಮಕಾಗಿ ಸ್ಪಂದಿಸದ ಬಗ್ಗೆ ತೀವ್ರ ನಿರಾಸೆಯಾಗಿದೆ’ ಎಂದಿದ್ದಾರೆ.

  ಜೈವಿಕ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿಯಮಗಳು ತಮಗೆ ಅನ್ವಯಿಸುವುದಿಲ್ಲ ಮತ್ತು ಯಾವುದೇ ನಿಯಮವನ್ನು ತುಳಿಯಲು, ಅಥವಾ ಉಲ್ಲಂಘಿಸಲು ತಾವು ಸಿದ್ಧ ಎಂದು ಪಾಶ್ಚಿಮಾತ್ಯ ದೇಶಗಳು ಎಲ್ಲಾ ರೀತಿಯಲ್ಲೂ ತೋರಿಸಿಕೊಟ್ಟಿವೆ.

ಇದು ಅವರ ವಸಾಹತುಶಾಹಿ ಮನಸ್ಥಿತಿಯನ್ನು ಪ್ರದರ್ಶಿಸಿದೆ ಎಂದವರು ಹೇಳಿದ್ದಾರೆ. ರಶ್ಯದ ಕರಡು ಪ್ರಸ್ತಾವನೆ ತಪ್ಪು ಮಾಹಿತಿ, ಅಪ್ರಾಮಾಣಿಕತೆ, ಕೆಟ್ಟ ನಂಬಿಕೆ ಮತ್ತು ಭದ್ರತಾ ಮಂಡಳಿಗೆ ಗೌರವ ನೀಡದ ರೀತಿಯಲ್ಲಿ ಇರುವುದರಿಂದ ಅದರ ವಿರುದ್ಧ ಅಮೆರಿಕ ಮತ ಹಾಕಿದೆ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್ಫೀಲ್ಡ್ ಪ್ರತಿಕ್ರಿಯಿಸಿದ್ದಾರೆ.

Similar News