ಆವರಣವಿರುವ ಸ್ಥಳಗಳಲ್ಲಿ ಪಥ ಸಂಚಲನ ನಡೆಸಿ ಎಂಬ ಮದ್ರಾಸ್‌ ಹೈಕೋರ್ಟ್‌ ಆದೇಶದ ನಂತರ ಕಾರ್ಯಕ್ರಮ ಕೈಬಿಟ್ಟ ಆರೆಸ್ಸೆಸ್‌

Update: 2022-11-05 11:09 GMT

ಚೆನ್ನೈ: ರವಿವಾರ ತಮಿಳುನಾಡಿನಾದ್ಯಂತ (Tamil Nadu) ಆರೆಸ್ಸೆಸ್‌ (RSS) ಆಯೋಜಿಸಲುದ್ದೇಶಿಸಿದ ಪಥ ಸಂಚಲನವನ್ನು ನಡೆಸದೇ ಇರಲು ನಿರ್ಧರಿಸಿದೆ. ಈ ರೂಟ್‌ ಮಾರ್ಚ್‌ಗಳನ್ನು ಮೈದಾನ ಅಥವಾ ಸ್ಟೇಡಿಯಂನಂತಹ ಆವರಣವಿರುವ ಸ್ಥಳಗಳಲ್ಲಿ ಮಾತ್ರ ನಡೆಸಲು ಮದ್ರಾಸ್‌ ಹೈಕೋರ್ಟ್‌ (Madras High Court) ಗುರುವಾರದ ತನ್ನ ಆದೇಶದಲ್ಲಿ ಸೂಚಿಸಿದ ಬೆನ್ನಲ್ಲಿ ಕಾರ್ಯಕ್ರಮ ನಡೆಸದೇ ಇರಲು ಆರೆಸ್ಸೆಸ್‌ ನಿರ್ಧರಿಸಿದೆ.

ಕೋರ್ಟ್‌ ಆದೇಶವನ್ನು ʻಅಸ್ವೀಕಾರಾರ್ಹʼ ಎಂದು ಬಣ್ಣಿಸಿರುವ ಆರೆಸ್ಸೆಸ್‌ ಅದರ ವಿರುದ್ಧ ಮೊರೆ ಸಲ್ಲಿಸುವುದಾಗಿ ತಿಳಿಸಿದೆ.

ತಮಿಳುನಾಡಿನಾದ್ಯಂತ 44 ಕಡೆಗಳಲ್ಲಿ ಮಾರ್ಚ್‌ ನಡೆಸಲು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಆರೆಸ್ಸೆಸ್‌ಗೆ ಅನುಮತಿ ನೀಡಿತ್ತು. ಅಷ್ಟೇ ಅಲ್ಲದೆ ಮಾರ್ಚ್‌ ಶಾಂತಿಯುತವಾಗಿರಬೇಕು ಇಲ್ಲದೇ ಇದ್ದರೆ ಅದರ ಪರಿಣಾಮ ಎದುರಿಸಬೇಕು ಎಂದೂ ನ್ಯಾಯಾಲಯ ಎಚ್ಚರಿಸಿತ್ತು. ಮತೀಯ ಸೂಕ್ಷ್ಮ ಪ್ರದೇಶಗಳಾದ ಕೊಯಂಬತ್ತೂರು, ಪೊಲ್ಲಾಚಿ, ನಾಗರಕೋಯಿಲ್‌ ಸಹಿತ ಆರು ಕಡೆಗಳಲ್ಲಿ ಮಾರ್ಚ್‌ ನಡೆಸಲು ಅನುಮತಿ ನೀಡಲು ನ್ಯಾಯಾಲಯ ನಿರಾಕರಿಸಿತ್ತು.

ಇದಕ್ಕೂ ಮುಂಚೆ ಆರೆಸ್ಸೆಸ್‌ ಅನುಮತಿ ಕೇಳಿದ್ದ 50 ಸ್ಥಳಗಳ ಪೈಕಿ ಕೇವಲ ಮೂರು ಸ್ಥಳಗಳಲ್ಲಿ ಮಾರ್ಚ್‌ ನಡೆಸಲು ತಮಿಳುನಾಡು ಸರಕಾರ ಅನುಮತಿ ನೀಡಿತ್ತು.‌

ಅಕ್ಟೋಬರ್‌ 2 ರಂದು ಆರೆಸ್ಸೆಸ್‌ ಮೊದಲು ಮಾರ್ಚ್‌ ನಡೆಸಲು ನಿರ್ಧರಿಸಿದ್ದರೂ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ ನಂತರ  ನ್ಯಾಯಾಲಯದ ಮೊರೆ ಹೋಗಿತ್ತು. ಪಿಎಫ್‌ಐ ಮೇಲೆ ನಿಷೇಧ ಹೇರಿದ್ದರಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗಬಹುದೆಂಬ ಕಾರಣವನ್ನು ಆಗ ಸರ್ಕಾರ ನೀಡಿತ್ತು.

ಇದನ್ನೂ ಓದಿ: ಗುಜರಾತ್‌ ಚುನಾವಣೆಯಿಂದ ಹಿಂದೆ ಸರಿಯಲು ಬಿಜೆಪಿ ಆಫರ್ ನೀಡಿದೆ: ಅರವಿಂದ ಕೇಜ್ರಿವಾಲ್ ಆರೋಪ

Similar News