ಜಂಟಿ ಸಮರಾಭ್ಯಾಸ ಬಹಿರಂಗ ಪ್ರಚೋದನೆ: ಉತ್ತರ ಕೊರಿಯಾ ಎಚ್ಚರಿಕೆ

Update: 2022-11-07 16:18 GMT

ಪ್ಯೋಂಗ್ಯಾಂಗ್, ನ.7: ಅಮೆರಿಕ- ದಕ್ಷಿಣ ಕೊರಿಯಾ (America - South Korea)ಜಂಟಿ ಸೇನಾ ಸಮರಾಭ್ಯಾಸವು ಬಹಿರಂಗ ಪ್ರಚೋದನೆಯಾಗಿದ್ದು ಇದಕ್ಕೆ ತನ್ನ ಪ್ರತಿಕ್ರಿಯೆ ಅಗಾಧ ಮತ್ತು ದೃಢ ನಿಶ್ಚಯದಿಂದ ಕೂಡಿರುತ್ತದೆ ಎಂದು ಉತ್ತರ ಕೊರಿಯಾದ ಸೇನೆ ಸೋಮವಾರ ಎಚ್ಚರಿಸಿದೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸೇನೆ ಕೊರಿಯಾ ಪರ್ಯಾಯ ದ್ವೀಪದಲ್ಲಿ ನಡೆಸುತ್ತಿರುವ ಜಂಟಿ ಸಮರಾಭ್ಯಾಸವು ಉದ್ದೇಶಪೂರ್ವಕವಾಗಿ ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಉತ್ತರ ಕೊರಿಯಾವನ್ನು ನೇರವಾಗಿ ಗುರಿಯಾಗಿಸಿದ ಅತ್ಯಂತ ಆಕ್ರಮಣಕಾರಿ ರೀತಿಯ ಅಪಾಯಕಾರಿ ಸಮರಾಭ್ಯಾಸವಾಗಿದೆ.

ಇದಕ್ಕೆ ಸದೃಢ ಮತ್ತು ಬಲಿಷ್ಟ ರೀತಿಯಲ್ಲಿ ಉತ್ತರ ನೀಡಲಾಗುವುದು ಎಂದು ಕೊರಿಯನ್ ಪೀಪಲ್ಸ್ ಆರ್ಮಿ(Korean People's Army)(ಉತ್ತರ ಕೊರಿಯಾ ಸೇನೆ)ಯ ಮುಖ್ಯಸ್ಥರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ(Korean Central News Agency)(ಕೆಸಿಎನ್ಎ) ವರದಿ ಮಾಡಿದೆ.

  ಅಮೆರಿಕ ಮತ್ತು ದಕ್ಷಿಣ ಕೊರಿಯಾ ತಮ್ಮ ಅತೀ ದೊಡ್ಡ ವಾಯುಪಡೆ ಸಮರಾಭ್ಯಾಸಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಕಳೆದ ವಾರ ಉತ್ತರ ಕೊರಿಯಾವು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಸಹಿತ ಹಲವು ಕ್ಷಿಪಣಿಗಳನ್ನು ಪರೀಕ್ಷೆ ನಡೆಸಿತ್ತು.

ಶತ್ರುಪಡೆಯ ವಾಯುನೆಲೆಗಳ ಮೇಲಿನ ದಾಳಿಯನ್ನು ಅನುಕರಿಸುವ ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ, ಶತ್ರುಗಳ ಯುದ್ಧವಿಮಾನವನ್ನು ಹೊಡೆದುರುಳಿಸುವ ಅಣಕು ಕಾರ್ಯಾಚರಣೆ ಯಶಸ್ವಿಯಾಗಿದೆ. ಶತ್ರುಗಳ ಕಾರ್ಯಾಚರಣೆಯ ನಿರ್ದೇಶನಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುವ ವಿಶೇಷ ಕ್ರಿಯಾತ್ಮಕ ಸಿಡಿತಲೆಯನ್ನು ಹೊಂದಿರುವ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯ ಪ್ರಯೋಗವೂ ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ಹೇಳಿದೆ.

 ಉತ್ತರ ಕೊರಿಯಾದ ಈ ನಡೆಯು ಪರಮಾಣು ಅಸ್ತ್ರ ಪರೀಕ್ಷೆಗೆ ಮುನ್ನುಡಿಯಾಗಿದೆ ಎಂದು ಅಮೆರಿಕ ಆರೋಪಿಸಿದೆ.

Similar News