ಟ್ವೆಂಟಿ-20 ಕ್ರಿಕೆಟ್: ವಿರಾಟ್ ಕೊಹ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಬ್ಯಾಟರ್

Update: 2022-11-10 12:54 GMT

ಅಡಿಲೇಡ್, ನ.10: ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಮುಂದುವರಿಸಿದ ಮಾಜಿ ನಾಯಕ ವಿರಾಟ್ ಕೊಹ್ಲಿ 4,000 ಟ್ವೆಂಟಿ-20 ರನ್ ಮೈಲಿಗಲ್ಲು ತಲುಪಿದ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಗುರುವಾರ ಅಡಿಲೇಡ್ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

20 ಓವರ್ ಕ್ರಿಕೆಟ್ ಇತಿಹಾಸದಲ್ಲಿ 4,000 ರನ್ ಪೂರೈಸಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ.

 ಇಂಗ್ಲೆಂಡ್ ವಿರುದ್ಧ 42 ರನ್ ಗಳಿಸಿದ ಬೆನ್ನಿಗೇ ಕೊಹ್ಲಿ 4,000 ರನ್ ತಲುಪಿದರು. ಲಿಯಾಮ್ ಲಿವಿಂಗ್‌ಸ್ಟೋನ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿದ ಬಳಿಕ 4 ಸಾವಿರ ರನ್ ಮೈಲಿಗಲ್ಲು ಕ್ರಮಿಸಿದರು. ಕೊಹ್ಲಿ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ತಕ್ಷಣ ಕ್ರಿಸ್ ಜೋರ್ಡನ್‌ಗೆ ವಿಕೆಟ್ ಒಪ್ಪಿಸಿದರು.

 4 ಸಾವಿರ ರನ್ ಮೈಲಿಗಲ್ಲು ಸ್ಥಾಪಿಸಿರುವ ಕೊಹ್ಲಿ ಈಗಾಗಲೇ ಪುರುಷರ ಟ್ವೆಂಟಿ-20 ವಿಶ್ವಕಪ್ ಇತಿಹಾಸದಲ್ಲಿ ಹೆಚ್ಚು ರನ್ ಗಳಿಸಿದ ಸಾಧನೆಯನ್ನೂ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಗ್ರೂಪ್-2 ಪಂದ್ಯದಲ್ಲಿ ಔಟಾಗದೆ 64 ರನ್ ಗಳಿಸಿದ್ದ ಕೊಹ್ಲಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಗರಿಷ್ಠ ರನ್(1,016 ರನ್)ಗಳಿಸಿದ್ದ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಅವರ ದಾಖಲೆಯನ್ನು ಮುರಿದಿದ್ದರು. ಜಯವರ್ಧನೆ 31 ಇನಿಂಗ್ಸ್‌ಗಳಲ್ಲಿ 1,016 ರನ್ ಗಳಿಸಿದ್ದರೆ, ಕೊಹ್ಲಿ ಟಿ-20 ವಿಶ್ವಕಪ್‌ನ ತನ್ನ 23ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ 2014ರ ಟಿ-20 ವಿಶ್ವಕಪ್‌ನಲ್ಲೂ ಅಗ್ರ ಸ್ಕೋರರ್ ಆಗಿದ್ದರು.

ಇದೀಗ ಕೊಹ್ಲಿ 115 ಟ್ವೆಂಟಿ-20 ಪಂದ್ಯಗಳಲ್ಲಿ 52.74ರ ಸರಾಸರಿಯಲ್ಲಿ 137.97 ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 4,008 ರನ್ ಗಳಿಸಿದ್ದಾರೆ. ಭಾರತದ ಐಕಾನ್ ಬ್ಯಾಟರ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಒಂದು ಶತಕ ಹಾಗೂ 37 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಅಗ್ರ-5 ಬ್ಯಾಟರ್‌ಗಳ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಸಹ ಆಟಗಾರ ಹಾಗೂ ಭಾರತದ ನಾಯಕ ರೋಹಿತ್ ಶರ್ಮಾ(3,853 ರನ್), ನ್ಯೂಝಿಲ್ಯಾಂಡ್‌ನ ಮಾರ್ಟಿನ್ ಗಪ್ಟಿಲ್(3,531), ಪಾಕಿಸ್ತಾನ ನಾಯಕ ಬಾಬರ್ ಆಝಂ(3,323 ರನ್) ಹಾಗೂ ಐರ್‌ಲ್ಯಾಂಡ್‌ನ ಪಾಲ್ ಸ್ಟಿರ್ಲಿಂಗ್(3,181 ರನ್)ಆ ನಂತರದ ಸ್ಥಾನದಲ್ಲಿದ್ದಾರೆ.

 ಇಂಗ್ಲೆಂಡ್ ವಿರುದ್ಧ ಇಂದು ಗಳಿಸಿರುವ 50 ರನ್ ಪ್ರಸಕ್ತ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕೊಹ್ಲಿಯವರ ನಾಲ್ಕನೇ ಅರ್ಧಶತಕವಾಗಿದೆ. ಪ್ರಸಕ್ತ ವಿಶ್ವಕಪ್‌ನಲ್ಲಿ 6 ಪಂದ್ಯಗಳಲ್ಲಿ ಒಟ್ಟು 296 ರನ್ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.

ಗುರುವಾರ 50 ರನ್ ಗಳಿಸುವ ಹಾದಿಯಲ್ಲಿ ಕೊಹ್ಲಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ 100ನೇ ಬೌಂಡರಿ ಬಾರಿಸಿ ಅಪೂರ್ವ ಸಾಧನೆ ಮಾಡಿದರು.

Similar News