T20 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಧ್ವನಿ: ಎಂಸಿಜಿಯಲ್ಲಿ ಹಾಡಲಿರುವ ಜಾನಕಿ ಈಶ್ವರ್
ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲು ಕಂಡು ಫೈನಲ್ ತಲುಪಲು ಭಾರತಕ್ಕೆ ಸಾಧ್ಯವಾಗದೇ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಉಂಟಾಗಿದ್ದರೂ ಭಾರತದ ಧ್ವನಿಯೊಂದು ವಿಶ್ವಕಪ್ ಫೈನಲ್ ಹಾಡಲು ಸಜ್ಜಾಗಿದೆ.
ಇಂಗ್ಲೆಂಡ್ – ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದಲ್ಲಿ ಕೇರಳ ಮೂಲದ 13 ವರ್ಷದ ಜಾನಕಿ ಈಶ್ವರ್ (Janaki Easwar) ವಿಶ್ವ ಪ್ರಸಿದ್ಧ ರಾಕ್ ಬ್ಯಾಂಡ್ "ಐಸ್ ಹೌಸ್"(Icehouse) ಮೂಲಕ 90 ಸಾವಿರ ಪ್ರೇಕ್ಷಕರಿಂದ ಕಿಕ್ಕಿರಿದ ಕ್ರೀಡಾಂಗಣದಲ್ಲಿ ಹಾಡಲಿದ್ದಾರೆ.
ಜಾನಕಿ ಈಶ್ವರ್ ತಮ್ಮ 12 ನೇ ವಯಸ್ಸಿನಲ್ಲಿ "ವಾಯ್ಸ್ ಆಸ್ಟ್ರೇಲಿಯಾ" ಸಂಗೀತ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಅತಿ ಕಿರಿಯ ವಯಸ್ಕಳೆಂದು ಖ್ಯಾತಿ ಪಡೆದಿದ್ದಾರೆ.
ಸಾವಿರಾರು ಕ್ರಿಕೆಟ್ ಪ್ರೇಕ್ಷಕರ ಮುಂದೆ ಹಾಡುತ್ತಿರುವ ಬಗ್ಗೆ ಉತ್ಸುಕಳಾಗಿರುವ ಜಾನಕಿ, ಭಾರತ ತಂಡ ಫೈನಲ್ ತಲುಪದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
"ಇಷ್ಟು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಹಾಗೂ ಇದನ್ನು ಟೆಲಿವಿಷನ್ ಪ್ರಸಾರದಲ್ಲಿ ನೋಡುವವರ ಮುಂದೆ ನಾನು ಹಾಡುವುದು ನಂಬಲಸಾಧ್ಯವಾದ ಅನುಭವ. ನನ್ನ ಪೋಷಕರು ಕ್ರಿಕೆಟ್ ಪ್ರೇಮಿಗಳು. ಅವರ ಮೂಲಕವೇ ಈ ಅವಕಾಶ ಎಷ್ಟು ದೊಡ್ಡದು ಎಂದು ನನಗೆ ಅರಿವಾಯಿತು. ಪಂದ್ಯದ ಟಿಕೆಟ್ ಸಂಪೂರ್ಣ ಮಾರಾಟವಾಗಿದೆಯೆಂದು ತಿಳಿಯಿತು. ನಾನು ಪಂದ್ಯ ವೀಕ್ಷಿಸಲು ಹಾಗೂ ಹಾಡಲು ಉತ್ಸುಕಳಾಗಿದ್ದೇನೆ. ಭಾರತ ತಂಡ ಫೈನಲ್ ತಲುಪಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು" ಎಂದು ಜಾನಕಿ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆದಿರುವ ಜಾನಕಿ ಅವರ ತಂದೆ ಅನೂಪ್ ದಿವಾಕರನ್ ಮತ್ತು ತಾಯಿ ದಿವ್ಯಾ ರವೀಂದ್ರನ್ ಕೇರಳದ ಕೋಝಿಕೋಡ್ ಮೂಲದವರಾಗಿದ್ದು, ಆಸ್ಟ್ರೇಲಿಯಾದಲ್ಲಿ ಕಳೆದ 15 ವರ್ಷಗಳಿಂದ ನೆಲೆಸಿದ್ದಾರೆ.
"ಪ್ರತಿ ಡಿಸೆಂಬರ್ ತಿಂಗಳಲ್ಲಿ ನಾವು ಕೇರಳಕ್ಕೆ ಭೇಟಿ ನೀಡುತ್ತೇವೆ. ನನ್ನ ಅಜ್ಜಿ, ತಾತಂದಿರು, ಸಂಬಂಧಿಕರ ಜೊತೆ ಕೋಝಿಕೋಡ್ ನಲ್ಲಿ ಸಮಯ ಕಳೆಯುವುದು ಹಾಗೂ ಮಲಬಾರ್ ಭೋಜನ ಸವಿಯುವುದೆಂದರೆ ಅತ್ಯಂತ ಸಂತೋಷ. ಕೊಚ್ಚಿ ಹಾಗೂ ವಯನಾಡ್ ನಲ್ಲಿರುವ ನಮ್ಮ ಸಂಬಂಧಿಕರನ್ನು ಭೇಟಿ ಮಾಡುವುದು ಖುಷಿ ತರುತ್ತದೆ" ಎಂದು ಜಾನಕಿ ಹೇಳಿದ್ದಾರೆ.
ಜಾನಕಿ ಈಶ್ವರ್ ಗಾಯನವನ್ನು ಪಂದ್ಯ ಪ್ರಾರಂಭಕ್ಕೆ ಮುನ್ನ ಆಯೋಜಿಸಲಾಗಿದ್ದು, ಎಲ್ಲ 16 ತಂಡಗಳನ್ನೂ ಹಾಡಿನ ಮೂಲಕ ಗೌರವ ನೀಡಲಾಗುತ್ತದೆ.