ಟರ್ಕಿಯಲ್ಲಿ ಬಾಂಬ್‌ ಸ್ಫೋಟ: ಕನಿಷ್ಟ 6 ಮಂದಿ ಮೃತ್ಯು, 53ಕ್ಕೂ ಹೆಚ್ಚು ಮಂದಿಗೆ ಗಾಯ

Update: 2022-11-13 18:42 GMT

 ಇಸ್ತಾನ್‌ಬುಲ್, ನ.13: ಟರ್ಕಿಯ ಇಸ್ತಾನ್‌ಬುಲ್ ನಗರದ ಜನನಿಬಿಡ ರಸ್ತೆಯಲ್ಲಿ ರವಿವಾರ ಸಂಭವಿಸಿದ ಪ್ರಬಲ ಬಾಂಬ್‌ಸ್ಫೋಟದಲ್ಲಿ ಕನಿಷ್ಟ 6 ಮಂದಿ ಮೃತಪಟ್ಟಿದ್ದು 53ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಗವರ್ನರ್‌ರನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ವರದಿ ಮಾಡಿದೆ.ಇಸ್ತಾನ್‌ಬುಲ್‌ನ ಕೇಂದ್ರದಲ್ಲಿರುವ ಬೆಯೋಗ್ಲು ಜಿಲ್ಲೆಯ ಇಸ್ತಿಕ್ಲಾಲ್ ರಸ್ತೆಯಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ್ದು ಪ್ರಾಥಮಿಕ ಮಾಹಿತಿಯಂತೆ 6 ಮಂದಿ ಮೃತಪಟ್ಟಿದ್ದು 53 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ತಾನ್‌ಬುಲ್‌ನ ಗವರ್ನರ್ ಆಲಿ ಯೆರ್ಲಿಕಾಯ ಹೇಳಿದ್ದಾರೆ.

ಪಾದಾಚಾರಿ ಮಾರ್ಗದಲ್ಲಿ ಸ್ಫೋಟ ಸಂಭವಿಸಿದ್ದು ಬೆಂಕಿಯ ಉಂಡೆ ಆಕಾಶಕ್ಕೆ ಚಿಮ್ಮಿದಾಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರು ದಿಕ್ಕಾಪಾಲಾಗಿ ಓಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ. ಪ್ರವಾಸಿಗರು ಹಾಗೂ ಸ್ಥಳೀಯರ ನೆಚ್ಚಿನ ಶಾಪಿಂಗ್ ಕೇಂದ್ರವಾಗಿರುವ ಇಸ್ತಿಕ್ಲಾಲ್ ರಸ್ತೆ ಸದಾ ಜನನಿಬಿಡವಾಗಿರುತ್ತದೆ. ಸ್ಥಳೀಯ ಕಾಲಮಾನ ಸಂಜೆ 4ಕ್ಕೆ ಸ್ಫೋಟ ಸಂಭವಿಸಿದ್ದು ಸ್ಫೋಟ ಹೇಗೆ ನಡೆದಿದೆ ಎಂಬ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸರಕಾರಿ ಸ್ವಾಮ್ಯದ ಅನಾದೊಲು ಸುದ್ಧಿಸಂಸ್ಥೆ ವರದಿ ಮಾಡಿದೆ.ಸ್ಫೋಟ ಸಂಭವಿಸಿದ ತಕ್ಷಣ ಪೊಲೀಸರನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಸಮೀಪದ ಕಾಸಿಂಪಾಸ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Similar News