‘ಗಲಭೆ’ಗೆ ಸಂಬಂಧಿಸಿ ಮೊದಲ ಮರಣದಂಡನೆ ಶಿಕ್ಷೆ ಜಾರಿ: ಇರಾನ್

Update: 2022-11-14 18:01 GMT

ಟೆಹ್ರಾನ್, ನ.14: ‘ಗಲಭೆಯಲ್ಲಿ’ ('in riot')ಸಂಬಂಧಿಸಿದ ಪ್ರಕರಣದಲ್ಲಿ ಮೊದಲ ಮರಣದಂಡನೆ ಶಿಕ್ಷೆಯನ್ನು ರವಿವಾರ ಪ್ರಕಟಿಸಲಾಗಿದೆ ಎಂದು ಇರಾನ್ ನ್ಯಾಯಾಂಗದ(Iranian Judiciary) ವೆಬ್ಸೈಟ್ ಹೇಳಿದೆ.

  ‘ಸರಕಾರಿ ಕಟ್ಟಡಕ್ಕೆ ಬೆಂಕಿ ಹಚ್ಚಿದ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ, ರಾಷ್ಟ್ರೀಯ ಭದ್ರತೆಯ ವಿರುದ್ಧ ಅಪರಾಧ ಎಸಗುವ ಪಿತೂರಿ ನಡೆಸಿದ ಅಪರಾಧಕ್ಕಾಗಿ ದೇವರ ಶತ್ರು ಹಾಗೂ ಭೂಮಿಯ ಮೇಲಿನ ಭ್ರಷ್ಟನಿಗೆ ಟೆಹ್ರಾನ್ ಕೋರ್ಟ್ (Tehran Court)ಮರಣದಂಡನೆ ಶಿಕ್ಷೆ ವಿಧಿಸಿದೆ’ ಎಂದು ವೆಬ್ಸೈಟ್ ವಿವರಿಸಿದೆ. ರಾಷ್ಟ್ರೀಯ ಭದ್ರತೆಯ ವಿರುದ್ಧ ಅಪರಾಧ ಎಸಗಿದ, ಸಾರ್ವಜನಿಕ ಕಾನೂನು ವ್ಯವಸ್ಥೆಗೆ ಧಕ್ಕೆ ತಂದ ಅಪರಾಧಕ್ಕೆ ಟೆಹ್ರಾನ್ನ ಮತ್ತೊಂದು ನ್ಯಾಯಾಲಯ ಇತರ 5 ಮಂದಿಗೆ 5ರಿಂದ 10 ವರ್ಷದವರೆಗೆ ಜೈಲುಶಿಕ್ಷೆ ವಿಧಿಸಿದೆ. ಶಿಕ್ಷೆಗೆ ಒಳಗಾದವರೆಲ್ಲರೂ ಮೇಲ್ಮನವಿ ಸಲ್ಲಿಸಬಹುದು ಎಂದು ವೆಬ್ಸೈಟ್ ಹೇಳಿದೆ.

 ದೇಶದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆಯನ್ನು ‘ಗಲಭೆ’ ಎಂದು ವ್ಯಾಖ್ಯಾನಿಸಿರುವ ಇರಾನ್ ಆಡಳಿತ, ಗಲಭೆಯಲ್ಲಿ ಶಾಮೀಲಾದ ಆರೋಪದಡಿ 2000ಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಿಸಿದೆ. ಭವಿಷ್ಯದಲ್ಲಿ ಯಾವುದೇ ಗಲಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ 100 ಯುವಜನರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ಇರ್ನಾ ಸುದ್ಧಿಸಂಸ್ಥೆ ವರದಿ ಮಾಡಿದೆ.

Similar News