ಖೆರ್ಸಾನ್‌ಗೆ ಉಕ್ರೇನ್ ಅಧ್ಯಕ್ಷರ ಭೇಟಿ

Update: 2022-11-14 18:04 GMT

ಕೀವ್, ನ.14: ಯುದ್ಧದ ಆರಂಭದ ದಿನಗಳಲ್ಲೇ ರಶ್ಯನ್ನರ ಕೈವಶವಾಗಿದ್ದ ಉಕ್ರೇನ್‌ನ ಪ್ರಮುಖ ನಗರ ಖೆರ್ಸಾನ್‌ನಿಂದ ರಶ್ಯದ ಪಡೆ ವಾಪಸಾದ ಬಳಿಕ ನಗರ ಮತ್ತೆ ಉಕ್ರೇನ್‌ನ ನಿಯಂತ್ರಣಕ್ಕೆ ಬಂದಿದ್ದು , ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಖೆರ್ಸಾನ್‌ಗೆ ಭೇಟಿ ನೀಡಿದ್ದಾರೆ ಎಂದು ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಖೆರ್ಸಾನ್‌ನಿಂದ ತನ್ನ ಸೇನೆಯನ್ನು ರಶ್ಯ ಶುಕ್ರವಾರ ಹಿಂದಕ್ಕೆ ಕರೆಸಿಕೊಂಡಿತ್ತು. ಶನಿವಾರ ನಗರವನ್ನು ಉಕ್ರೇನ್ ಸೇನೆ ಮರಳಿ ವಶಪಡಿಸಿಕೊಂಡಿದೆ. ಖೆರ್ಸಾನ್‌ನಲ್ಲಿ ರಶ್ಯ ನಡೆಸಿದ ಯುದ್ಧಾಪರಾಧದ ಸಾವಿರಾರು ನಿದರ್ಶನಗಳು ಪತ್ತೆಯಾಗಿದೆ ಎಂದು ಝೆಲೆನ್‌ಸ್ಕಿ ರವಿವಾರ ಹೇಳಿದ್ದಾರೆ. ರಶ್ಯದ ಹಿಡಿತದಿಂದ ಮುಕ್ತಿ ಪಡೆದಿರುವ ಬಗ್ಗೆ ನಗರದ ನಿವಾಸಿಗಳು ತಮ್ಮ ಸಂತಸವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ. ಖೆರ್ಸಾನ್ ಮೇಲಿನ ನಿಯಂತ್ರಣವು ಉಕ್ರೇನ್‌ಗೆ ಸಂಪೂರ್ಣ ಖೆರ್ಸಾನ್ ಪ್ರಾಂತದತ್ತ ಮುನ್ನುಗ್ಗಲು ಮತ್ತು ಈ ಮೂಲಕ ಪಶ್ಚಿಮದಲ್ಲಿ ಕಪ್ಪು ಸಮುದ್ರ ಮತ್ತು ಪೂರ್ವದಲ್ಲಿ ಅಝೋವ್ ಸಮುದ್ರದ ಆಯಕಟ್ಟಿನ ಬಂದರಿನ ಮೇಲೆ ನಿಯಂತ್ರಣ ಪಡೆಯಲು ನೆರವಾಗಲಿದೆ.

ಕಳೆದ ಸೆಪ್ಟಂಬರ್‌ನಲ್ಲಿ ರಶ್ಯವು ವಿಲೀನಗೊಳಿಸಿದ್ದ ಉಕ್ರೇನ್‌ನ 4 ಪ್ರಾಂತಗಳಲ್ಲಿ ಖೆರ್ಸಾನ್ ಪ್ರಾಂತವೂ ಸೇರಿದೆ. ಈ ನಾಲ್ಕೂ ಪ್ರಾಂತಗಳನ್ನು ಯಾವುದೇ ಬೆಲೆ ತೆತ್ತಾದರೂ ತನ್ನಲ್ಲೇ ಉಳಿಸಿಕೊಳ್ಳುವುದಾಗಿ ಪುಟಿನ್ ಘೋಷಿಸಿದ್ದರು.ಈ ಮಧ್ಯೆ, ಖೆರ್ಸಾನ್ ಈಗಲೂ ರಶ್ಯದ ಭಾಗವಾಗಿಯೇ ಉಳಿದಿದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

Similar News