ಅಮೆರಿಕದ ಸೆನೆಟ್ ಮತ್ತೆ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ತೆಕ್ಕೆಗೆ

Update: 2022-11-15 11:11 GMT

ಅಮೆರಿಕದಲ್ಲಿ ನಡೆದ ನ.8 ರ ಮಧ್ಯಂತರ ಚುನಾವಣೆಯಲ್ಲಿ ಮತ್ತೆ ಆಡಳಿತಾರೂಢ ಡೆಮೊಕ್ರ್ಯಾಟಿಕ್ ಪಕ್ಷ ಜಯಗಳಿಸಿದೆ. ಸೆನೆಟ್ ನಲ್ಲಿರುವ ಒಟ್ಟು 100 ಸ್ಥಾನಗಳಲ್ಲಿ ಇಲ್ಲಿಯವರೆಗೆ 50 ಸ್ಥಾನಗಳಲ್ಲಿ ಜಯಗಳಿಸಿದೆ. ಟ್ರಂಪ್ ನಾಯಕತ್ವದ ರಿಪಬ್ಲಿಕನ್ ಪಕ್ಷ 49 ಸ್ಥಾನಗಳಲ್ಲಿ ಜಯಗಳಿಸಿದೆ. ಜಾರ್ಜಿಯಾ ರಾಜ್ಯದ ಒಂದು ಸ್ಥಾನಕ್ಕೆ ಡಿಸೆಂಬರ್ 6 ರಂದು ಮರುಚುನಾವಣೆ (Run off) ನಡೆಯಲಿದೆ.

ಒಂದು ವೇಳೆ ಜಾರ್ಜಿಯಾ ಸೆನೆಟ್ ಸ್ಥಾನವು ರಿಪಬ್ಲಿಕನ್ ಪಕ್ಷದ ತೆಕ್ಕೆಗೆ ಹೋದರೂ ಉಪಾಧ್ಯಕ್ಷರಾದ ಕಮಲಾ ಹ್ಯಾರೀಸ್ ಸೆನೆಟ್ ಟೈ ಬ್ರೇಕರ್ (51 ನೇ ಮತ) ಆಗಿ ಡೆಮಾಕ್ರಟಿಕ್ ಪಕ್ಷವು ಬಹುಮತ ಹೊಂದಿರುತ್ತದೆ. 

ಕಳೆದ 2020ರ ರನ್ ಆಫ್ ಚುನಾವಣೆಯಲ್ಲಿ ಜಾರ್ಜಿಯಾ ಡೆಮಾಕ್ರಟಿಕ್ ಸೆನೆಟರ್ ರಫಿಯಾಲ್ ವಾರ್ನಾಕ್ 93,000 (2%) ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರು ಒಟ್ಟು 49.4% ಮತ ಪಡೆದು  35,000 ಮತಗಳಿಂದ  ಮುಂದಿದ್ದಾರೆ. ಆದರೆ ಜಾರ್ಜಿಯಾ ರಾಜ್ಯದ ಕಾನೂನು ಪ್ರಕಾರ ಗೆಲುವು ಸಾಧಿಸಲು ಅಭ್ಯರ್ಥಿಯು 50 %  ಮತ ಪಡೆಯಬೇಕು. ಇಲ್ಲವಾದರೆ ಒಂದು ತಿಂಗಳ ನಂತರ ಮತ್ತೆ ಚುನಾವಣೆಯಾಗುತ್ತದೆ.

ಎರಡೂ ಪಕ್ಷಗಳೂ ಈಗ ಜಾರ್ಜಿಯಾ ಸೆನೆಟ್ ಸ್ಥಾನ ಗೆಲ್ಲಲು ಟಿ.ವಿ, ಸಾಮಾಜಿಕ ಜಾಲತಾಣಗಳಲ್ಲಿ, ಅಂಚೆ ಹಾಗೂ ಫೋನ್ ಕರೆಗಳ ಮೂಲಕ ಮತದಾರರನ್ನು ಸಂಪರ್ಕಿಸಿ ತಮ್ಮ ಕಡೆ ಮತ ಸೆಳೆಯಲು ಪ್ರಯತ್ನಿಸುತ್ತಾರೆ.

ಅಮೆರಿಕಾದ ಹೌಸ್ (ರಾಷ್ಟ್ರೀಯ ಅಸೆಂಬ್ಲಿ)ಯಲ್ಲಿ ಸಹ ಟ್ರಂಪ್ ಬೆಂಬಲಿತ ಬಲಪಂಥೀಯ ಅಭ್ಯರ್ಥಿಗಳು ತೀವ್ರ ಸೋಲು ಕಂಡಿದ್ದಾರೆ. 435 ಸ್ಥಾನಗಳಿರುವ U.S. House ನಲ್ಲಿ ಬೇಕಾಗಿರುವ 218 ರ ಬಹುಮತಕ್ಕೆ ಎರಡೂ ಪಕ್ಷಗಳು ತೀವ್ರ ಪೈಪೋಟಿ ನಡೆಸಿದ್ದು ಪ್ರಸ್ತುತ ಮತಗಳ ಎಣಿಕೆ ನಡೆದಿದ್ದು ವಿರೋಧಿ ರಿಪಬ್ಲಿಕನ್ ಪಕ್ಷ 219 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷ 216 ಸ್ಥಾನ ಪಡೆದು ಅಲ್ಲಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿದೆ.

ಚುನಾವಣಾ ಪಂಡಿತರು ಹಾಗೂ ಮಾಧ್ಯಮಗಳ ಪ್ರಕಾರ ಡೆಮಾಕ್ರಟಿಕ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುವ ನಿರೀಕ್ಷೆಯಿತ್ತು. ಜನಾಭಿಪ್ರಾಯ ಸಮೀಕ್ಷೆಯ ಪ್ರಕಾರ ಅಧ್ಯಕ್ಷ ಬೈಡನ್ ಅವರ ಕಾರ್ಯಕ್ಷಮತೆ ಬಗ್ಗೆ ಕೇವಲ 39% ಬೆಂಬಲವಿದ್ದರೂ ಸಹ ಮತದಾರರು ಅವರ ಪಕ್ಷಕ್ಕೆ ಬೆಂಬಲಿಸಿದ್ದಾರೆ. 

ಹಣದುಬ್ಬರ, ಬೆಲೆ ಏರಿಕೆ, ಅಪರಾಧಗಳಲ್ಲಿ ಏರಿಕೆ, ಅಕ್ರಮ ವಲೆಸೆಗಾರರ ಏರಿಕೆಯಂತಹ ಸಮಸ್ಯೆಗಳು ಈ ಬಾರಿ ಚುನಾವಣೆಯ ಪ್ರಮುಖ ವಿಷಯವಾಗಿತ್ತು. 

ನವೆಂಬರ್ 15, 2022 ರಂದು ಡೊನಾಲ್ಡ್ ಟ್ರಂಪ್ 2024 ರಲ್ಲಿ ಬರಲಿರುವ ಮುಂದಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಘೋಷಿಸುವ ಸಾಧ್ಯತೆಯಿದೆ.

Similar News