ಉಕ್ರೇನ್, ರಶ್ಯ ಎರಡೂ ಯುದ್ಧ ಕೈದಿಗಳನ್ನು ಹಿಂಸಿಸಿವೆ ವಿಶ್ವಸಂಸ್ಥೆ ವರದಿ

Update: 2022-11-15 16:49 GMT

 ಜಿನೆವಾ, ನ.15: ಸುಮಾರು 9 ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷದ ಸಂದರ್ಭ ಉಕ್ರೇನ್(Ukraine) ಹಾಗೂ ರಶ್ಯ ಎರಡೂ ದೇಶಗಳೂ ಯುದ್ಧ ಕೈದಿಗಳನ್ನು ಹಿಂಸಿಸಿವೆ ಎಂದು, ವಿದ್ಯುತ್ ಶಾಕ್ ಹಾಗೂ ಬಲವಂತದ ನಗ್ನತೆಯ ಉದಾಹರಣೆಯೊಂದಿಗೆ ವಿಶ್ವಸಂಸ್ಥೆ (WHO)ಮಾನವ ಹಕ್ಕುಗಳ ಕಾರ್ಯಾಲಯ (ಒಎಚ್ಸಿಎಚ್ಆರ್) ವರದಿ ಮಾಡಿದೆ.

ಸಂಘರ್ಷದ ಹಿನ್ನೆಲೆಯಲ್ಲಿ ಎರಡೂ ದೇಶಗಳಲ್ಲಿ ಬಂಧನದಲ್ಲಿರುವ 100ಕ್ಕೂ ಅಧಿಕ ಯುದ್ಧಕೈದಿಗಳನ್ನು ಸಂದರ್ಶಿಸಿರುವ ವಿಶ್ವಸಂಸ್ಥೆಯ ಕಾರ್ಯಾಲಯ ಈ ವರದಿ ಸಿದ್ಧಪಡಿಸಿದೆ. ರಶ್ಯವು ತನ್ನ ಬಂಧನ ಕೇಂದ್ರಕ್ಕೆ ಯಾರಿಗೂ ಪ್ರವೇಶಾವಕಾಶ ನೀಡದ ಹಿನ್ನೆಲೆಯಲ್ಲಿ, ಬಿಡುಗಡೆಗೊಂಡ ಉಕ್ರೇನ್ ಕೈದಿಗಳನ್ನು ಸಂದರ್ಶಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಅಧ್ಯಯನ ತಂಡದ ಮುಖ್ಯಸ್ಥೆ ಮೆಟಿಲ್ಡಾ ಬಾಗ್ನರ್ ಜಿನೆವಾ(Matilda Bagner Geneva)ದಲ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

     ರಶ್ಯ ಬಿಡುಗಡೆಗೊಳಿಸಿರುವ ಉಕ್ರೇನ್ನ ಕೈದಿಗಳು ರಶ್ಯದ ಬಂಧನ ಕೇಂದ್ರದಲ್ಲಿ ಅನುಭವಿಸಿದ ನರಕಯಾತನೆ, ರಶ್ಯ ಅಧಿಕಾರಿಗಳ ಅಮಾನವೀಯ ವರ್ತನೆಯನ್ನು ವಿವರಿಸಿದ್ದಾರೆ. ನಾಯಿಯನ್ನು ಛೂ ಬಿಡುವುದು, ಟೇಸರ್(ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಶಾಕ್ ನೀಡುವ ಸಾಧನ. ಇದರಿಂದ ಕೆಲ ಸಮಯದವರೆಗೆ ದೇಹದ ಅವಯವಗಳ ಚಲನಶಕ್ತಿ ನಷ್ಟವಾಗುತ್ತದೆ) ಅಥವಾ ಮಿಲಿಟರಿ ಫೋನ್ಗಳನ್ನು ಬಳಸಿ ವಿದ್ಯುತ್ ಶಾಕ್ ನೀಡುವುದು, ಲೈಂಗಿಕ ಹಿಂಸೆಯ ಬಗ್ಗೆ ಕೈದಿಗಳು ವಿವರಿಸಿದ್ದಾರೆ. ಕೈದಿಗಳನ್ನು ಬೆದರಿಸುವ ಮತ್ತು ಅವಮಾನಗೊಳಿಸುವ ಉದ್ದೇಶದ ಕೃತ್ಯ ಇದಾಗಿದೆ.

ರಶ್ಯ ಪರ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಉಕ್ರೇನ್ನ ಡೊನೆಟ್ಸ್ಕ್ ಪ್ರಾಂತದಲ್ಲಿನ ಜೈಲಿನಲ್ಲಿ ‘ರಶ್ಯದ ಸಂಯೋಜಿತ ಸಶಸ್ತ್ರ ಗುಂಪು ವಿದ್ಯುತ್ ವಯರನ್ನು ತನ್ನ ಜನನಾಂಗ ಹಾಗೂ ಮೂಗಿಗೆ ಸಿಕ್ಕಿಸಿ ವಿದ್ಯುತ್ ಶಾಕ್ ನೀಡಿದ್ದಾರೆ. ನೋವಿನಿಂದ ಒದ್ದಾಡುತ್ತಿದ್ದಾಗ ತಮಾಷೆ ಮಾಡುತ್ತಿದ್ದರು. ಅವರು ಕೇಳಿದ ಪ್ರಶ್ನೆಗೆ ತಾನು ನೀಡುವ ಉತ್ತರವನ್ನು ಕೇಳುವ ವ್ಯವಧಾನವೂ ಅವರಲ್ಲಿರಲಿಲ್ಲ ಎಂದು ಉಕ್ರೇನ್ ಯುದ್ಧಕೈದಿ ಹೇಳಿರುವುದಾಗಿ ಮೆಟಿಲ್ಡಾ ಬಾಗ್ನರ್ ವಿವರಿಸಿದ್ದಾರೆ.

 ಉಕ್ರೇನ್ ಸೇನೆಗೆ ಸೆರೆಸಿಕ್ಕಿದ ರಶ್ಯದ ಯೋಧರನ್ನು ನ್ಯಾಯಸಮ್ಮತ ವಿಚಾರಣೆ ನಡೆಸದೆ ಮರಣದಂಡನೆ ಶಿಕ್ಷೆ ವಿಧಿಸಿರುವ ಹಾಗೂ ಇತರ ರೀತಿಯ ಹಿಂಸೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿಯಿದೆ . ಉಕ್ರೇನ್ ಅಧಿಕಾರಿಗಳು ತಮ್ಮ ಬಟ್ಟೆಬಿಚ್ಚಿಸಿ ನಗ್ನಗೊಳಿಸಿದ ಬಳಿಕ, ಕೈಗಳನ್ನು ಹಿಂದಕ್ಕೆ ಕಟ್ಟಿ, ಲಾರಿಗಳಲ್ಲಿ ಕುರಿಯಂತೆ ತುಂಬಿಸಿ ಜೈಲಿಗೆ ಸಾಗಿಸುತ್ತಿದ್ದರು ಎಂದು ರಶ್ಯದ ಯುದ್ಧ ಕೈದಿಗಳು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ವರದಿ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಯ, ಯುದ್ಧ ಕೈದಿಗಳಿಗೆ ಚಿತ್ರಹಿಂಸೆ ಅಥವಾ ದೌರ್ಜನ್ಯ ಎಸಗಿರುವ ಆರೋಪ ಸುಳ್ಳು ಎಂದಿದೆ. ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿ, ಕೈದಿಗಳ ಮಾನವ ಹಕ್ಕಿನ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಕ್ರೇನ್ ಹೇಳಿದೆ.

Similar News