​ಅಮೆರಿಕ: ತನ್ನ ಜನಾಂಗ ಶ್ರೇಷ್ಟವೆಂದು ತರಗತಿಯಲ್ಲಿ ಹೇಳಿದ ಶಿಕ್ಷಕನ ವಜಾ

Update: 2022-11-15 17:03 GMT

 ನ್ಯೂಯಾರ್ಕ್, ನ.15: ತನ್ನ ಜನಾಂಗ ಶ್ರೇಷ್ಟ ಎಂದು ವಿದ್ಯಾರ್ಥಿಗಳಿಗೆ ಹೇಳಿದ ಅಮೆರಿಕದ ಟೆಕ್ಸಾಸ್(Texas) ನ ಶಾಲಾ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಎನ್ಬಿಸಿ ನ್ಯೂಸ್ ಮಂಗಳವಾರ ವರದಿ ಮಾಡಿದೆ.


ಟೆಕ್ಸಾಸ್‌ನ ಬೋಲ್ಸ್ ಮಿಡಲ್ (Bowles Middle of Texas)ಸ್ಕೂಲ್‌ನಲ್ಲಿ ತರಗತಿಯಲ್ಲಿ ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಿಕ್ಷಕ ತರಗತಿಯ ಇಬ್ಬರು ಆಫ್ರಿಕನ್ ಅಮೆರಿಕನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಹೇಳಿಕೆ ನೀಡಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
 ‘ಹೃದಯಾಂತರಾಳದಲ್ಲಿ ನಾನೊಬ್ಬ ಜನಾಂಗೀಯವಾದಿ.

ಅಂದರೆ ನನ್ನ ಜನಾಂಗ ಅತ್ಯಂತ ಶ್ರೇಷ್ಟ ಎಂದು ಯೋಚಿಸುವ ವ್ಯಕ್ತಿ. ಎಲ್ಲರೂ ಈ ರೀತಿ ಯೋಚಿಸುತ್ತಾರೆ, ಆದರೆ ಅದನ್ನು ಹೇಳಿಕೊಳ್ಳುವಷ್ಟು ಪ್ರಾಮಾಣಿಕರಾಗಿಲ್ಲ’ ಎಂದು ಶಿಕ್ಷಕ ಹೇಳಿದಾಗ ಒಬ್ಬ ವಿದ್ಯಾರ್ಥಿ ‘ಅಂದರೆ ನೀವೊಬ್ಬ ಜನಾಂಗೀಯವಾದಿಯೇ’ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಶಿಕ್ಷಕರು ‘ಎಲ್ಲರೂ ಒಂದು ಹಂತದಲ್ಲಿ ಜನಾಂಗೀಯವಾದಿಗಳೇ’ ಎಂದುತ್ತರಿಸಿದ್ದಾರೆ. ಆಗ ತರಗತಿಯ ಕೆಲ ವಿದ್ಯಾರ್ಥಿಗಳು ‘ನಮಗೆ ನಿಮ್ಮ ಮೇಲೆ ಗೌರವ ಉಳಿದಿಲ್ಲ ಎಂದು ಹೇಳಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿದೆ.


ತರಗತಿಯಲ್ಲಿ ಶಿಕ್ಷಕ ನಡೆಸಿದ ಈ ಚರ್ಚೆ ‘ಅನುಚಿತ, ತಪ್ಪಾದ ಮತ್ತು ಸ್ವೀಕಾರಾರ್ಹವಲ್ಲದ ಕ್ರಮವಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಪೋಷಕರ ಕ್ಷಮೆ ಯಾಚಿಸುತ್ತೇನೆ. ಜಿಲ್ಲೆಯ ಯಾವುದೇ ಶಾಲೆಯಲ್ಲಿ ಈ ರೀತಿಯ ಚರ್ಚೆಯನ್ನು ಸಹಿಸಲು ಸಾಧ್ಯವಿಲ್ಲ. ಈ ಸಂಭಾಷಣೆಯು ನಮ್ಮ ಪ್ರಮುಖ ನಂಬಿಕೆಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಇದು ನಮ್ಮ ಸಂಸ್ಕೃತಿಯ ಪ್ರತಿಬಿಂಬವಲ್ಲ ಎಂದು ಫ್ಲುಗರ್ವಿಲ್ ಇಂಡಿಪೆಂಡೆಂಟ್ ಸ್ಕೂಲ್ ಡಿಸ್ಟ್ರಿಕ್ಟ್ನ ಸೂಪರಿಂಟೆಂಡೆಂಟ್ ಡಗ್ಲಾಸ್ ಕಿಲಿಯನ್ ಹೇಳಿದ್ದಾರೆ.

Similar News