​ಪತ್ರಕರ್ತೆ ಶಿರೀನ್ ಹತ್ಯೆ ಪ್ರಕರಣದ ತನಿಖೆಗೆ ಸಹಕರಿಸುವುದಿಲ್ಲ: ಇಸ್ರೇಲ್

Update: 2022-11-15 17:33 GMT

ಟೆಲ್ಅವೀವ್, ನ.15: ಅಲ್ಜಝೀರಾ ಪತ್ರಕರ್ತೆ ಶಿರೀನ್ ಅಬು (Shireen Abu)ಅವರನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ತನಿಖೆಗೆ ತಾನು ಸಹಕರಿಸುವುದಿಲ್ಲ ಎಂದು ಇಸ್ರೇಲ್ ಸೋಮವಾರ ಹೇಳಿದೆ.


ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯ ಜೆನಿನ್ ನಗರದಲ್ಲಿ ಮೇ 11ರಂದು ಇಸ್ರೇಲ್ ಸೇನೆ ನಡೆಸಿದ ಕಾರ್ಯಾಚರಣೆಯ ಬಗ್ಗೆ ವರದಿ ಮಾಡುತ್ತಿದ್ದ ಶಿರೀನ್ ಅವರ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ. ಇಸ್ರೇಲ್ ಸೇನೆ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿದೆ ಎಂದು ಅಲ್ಜಝೀರಾ(Aljazeera) ಆರೋಪಿಸಿದ್ದರೆ ಇಸ್ರೇಲ್ ಆರೋಪವನ್ನು ನಿರಾಕರಿಸಿತ್ತು.


ಶಿರೀನ್ ಹತ್ಯೆ ಪ್ರಕರಣದ ಬಗ್ಗೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(Federal Bureau of Investigation)(ಎಫ್ಬಿಐ) ತನಿಖೆ ನಡೆಸಲಿದೆ ಎಂದು ಸೋಮವಾರ ಅಮೆರಿಕದ ನ್ಯಾಯ ಇಲಾಖೆ ಇಸ್ರೇಲ್ಗೆ ಮಾಹಿತಿ ರವಾನಿಸಿದೆ. ಇದಕ್ಕೆ ಮಂಗಳವಾರ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ನ ರಕ್ಷಣಾ ಸಚಿವ ಬೆನ್ನೀ ಗಾಂಟ್ಸ್ `ಶಿರೀನ್ ಅವರ ದುರಂತ ಮರಣದ ಬಗ್ಗೆ ತನಿಖೆ ನಡೆಸಲು ಅಮೆರಿಕದ ನ್ಯಾಯ ಇಲಾಖೆ ತೆಗೆದುಕೊಂಡ ನಿರ್ಧಾರ ತಪ್ಪಾಗಿದೆ. ಇಸ್ರೇಲ್ನ ರಕ್ಷಣಾ ಪಡೆ ನಡೆಸಿದ ವೃತ್ತಿಪರ, ಸ್ವತಂತ್ರ ತನಿಖೆಯ ವರದಿಯನ್ನು ಅಮೆರಿಕದ ಅಧಿಕಾರಿಗಳಿಗೂ ಒದಗಿಸಲಾಗಿದೆ' ಎಂದು ಹೇಳಿದ್ದಾರೆ. 


ಜೂನ್ನಲ್ಲಿ ವಿಶ್ವಸಂಸ್ಥೆ ನಡೆಸಿದ್ದ ತನಿಖೆಯ ವರದಿಯಲ್ಲಿ `ಹತ್ಯೆಯಾದ ಸಂದರ್ಭ ಶಿರೀನ್ ಅವರು ಪೆಲೆಸ್ತೀನ್ನ ಗುಂಡುಹಾರಾಟ ವಲಯದ ಸಮೀಪ ಇರಲಿಲ್ಲ ಮತ್ತು ಇದಕ್ಕೆ ಇಸ್ರೇಲ್ ಸೇನೆ  ಹೊಣೆಯಾಗಿರುವುದು ಬಹುತೇಕ ಖಚಿತವಾಗಿದೆ. ಶಿರೀನ್ ಹಾಗೂ ಇತರ ಪತ್ರಕರ್ತರತ್ತ ಇಸ್ರೇಲ್ ಯೋಧರು ಗುಂಡು ಹಾರಿಸಿದ್ದಾರೆ' ಎಂದು ಉಲ್ಲೇಖಿಸಲಾಗಿದೆ.

Similar News