ಇಸ್ರೇಲ್ ಉದ್ಯಮಿಯ ತೈಲ ಹಡಗಿಗೆ ಡ್ರೋನ್ ದಾಳಿ
Update: 2022-11-16 22:03 IST
ಮಸ್ಕತ್, ನ.16: ಒಮಾನ್ ಕರಾವಳಿಯ ಬಳಿ ಇಸ್ರೇಲ್ ಉದ್ಯಮಿಗೆ ಸಂಬಂಧಿಸಿದ ತೈಲಟ್ಯಾಂಕರ್ ಮೇಲೆ ಬಾಂಬ್ ಹೊತ್ತೊಯ್ಯುವ ಡ್ರೋನ್ ಮೂಲಕ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಬುಧವಾರ ವರದಿ ಮಾಡಿದೆ.
ಮಂಗಳವಾರ ರಾತ್ರಿ ದಾಳಿ ನಡೆದಿದೆ. ಇಸ್ರೇಲ್ನ ಉದ್ಯಮಿ ಇಡಾನ್ ಓಫರ್ (Idan Ofer)ಮಾಲಕತ್ವದ ಸಿಂಗಾಪುರ ಮೂಲದ ಈಸ್ಟರ್ನ್ ಪೆಸಿಫಿಕ್ ಶಿಪ್ಪಿಂಗ್ (Eastern Pacific Shipping)ಸಂಸ್ಥೆಗೆ ಸೇರಿದ ತೈಲ ಸಾಗಿಸುವ ನೌಕೆ ಇದಾಗಿದ್ದು ಇದುವರೆಗೆ ಯಾರೂ ದಾಳಿಯ ಹೊಣೆಯನ್ನು ವಹಿಸಿಕೊಂಡಿಲ್ಲ. ಘಟನೆಯ ಮಾಹಿತಿ ದೊರಕಿದ್ದು ಇದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬ್ರಿಟನ್ ರಕ್ಷಣಾ ಪಡೆಯ ಸಹಸಂಸ್ಥೆ `ಯುನೈಟೆಡ್ ಕಿಂಗ್ಡಮ್ ಮಾರಿಟೈಮ್ ಟ್ರೇಡ್ ಆಪರೇಷನ್ಸ್' ಹೇಳಿರುವುದಾಗಿ ವರದಿಯಾಗಿದೆ.
ದಾಳಿಯ ಹಿಂದೆ ಇರಾನ್ ಕೈವಾಡ ಇರುವ ಸಾಧ್ಯತೆಯಿದೆ ಎಂದು ಇಸ್ರೇಲ್ನ ಉನ್ನತ ಮೂಲಗಳು ಹೇಳಿವೆ.