ಇರಾನ್: ಪ್ರತಿಭಟನೆಯ ಸಂದರ್ಭ ಗುಂಡಿನ ದಾಳಿ; ಇಬ್ಬರು ಮಕ್ಕಳ ಸಹಿತ 9 ಮಂದಿ ಮೃತ್ಯು

Update: 2022-11-17 16:00 GMT

  ಟೆಹ್ರಾನ್, ನ.17: ಇರಾನ್‌ನ ದಕ್ಷಿಣ ಪ್ರಾಂತದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬೈಕ್ ನಲ್ಲಿ ಬಂದ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ 9 ಮಂದಿ ಮೃತಪಟ್ಟಿದ್ದು 10 ಮಂದಿ ಗಾಯಗೊಂಡಿರುವುದಾಗಿ ಸರಕಾರಿ ಸ್ವಾಮ್ಯದ ಇರ್ನಾ ಸುದ್ಧಿಸಂಸ್ಥೆ ಗುರುವಾರ ವರದಿ ಮಾಡಿದೆ.

ಖುಜೆಸ್ತಾನ್ ಪ್ರಾಂತದ ಇಝೆಹ್ ನಗರದ ಸೆಂಟ್ರಲ್ ಮಾರ್ಕೆಟ್ ಎದುರು ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭ ಎರಡು ಬೈಕ್ ಗಳಲ್ಲಿ ಬಂದ ದಾಳಿಕೋರರು ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದು 10 ಮಂದಿ ಗಾಯಗೊಂಡಿದ್ದಾರೆ. 

ದಾಳಿಗೆ ಸಂಬಂಧಿಸಿ ಮೂವರು ಶಂಕಿತರನ್ನು ಬಂಧಿಸಿದ್ದು ಮತ್ತೊಬ್ಬನ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಖುಜೆಸ್ತಾನ್ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ. 4 ಗಂಟೆಯ ಬಳಿಕ ಇರಾನ್ನ ಮೂರನೇ ದೊಡ್ಡ ನಗರ ಇಸ್ಫಹಾನ್ನಲ್ಲಿ ಬೈಕ್ನಲ್ಲಿ ಬಂದ ಇಬ್ಬರು ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಬಾಸಿಜ್ ಅರೆಸೇನಾ ಪಡೆಯ ಮೂವರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ. 

ಸೆಪ್ಟಂಬರ್ 16ರಂದು ಪೊಲೀಸ್ ಕಸ್ಟಡಿಯಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಮೃತಪಟ್ಟ ಬಳಿಕ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ದಾಳಿ ನಡೆಸಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಅವರನ್ನು ನ್ಯಾಯಾಂಗ ವ್ಯವಸ್ಥೆಗೆ ಹಸ್ತಾಂತರಿಸುವಂತೆ ಅಧ್ಯಕ್ಷ ಇಬ್ರಾಹಿಂ ರೈಸಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 

Similar News