×
Ad

ಕೇಂಬ್ರಿಡ್ಜ್ ನಿಘಂಟಿನ ವರ್ಷದ ಪದ ‘ಹೋಮರ್’?

Update: 2022-11-17 21:34 IST

   ಲಂಡನ್, ನ.17: ಕೇಂಬ್ರಿಡ್ಜ್ ನಿಘಂಟು 2022ರ ವರ್ಷದ ಪದ ‘ಹೋಮರ್’ ಎಂದು ಮಾಹಿತಿ ನೀಡಿದೆ. ಇದು ವೆಬ್ ಆಧರಿತ ಜನಪ್ರಿಯ ಜಾಗತಿಕ ಆಟ ‘ವರ್ಡ್ಲೆ’ಯಿಂದ ಸ್ಫೂರ್ತಿ ಪಡೆದಿದೆ ಎಂದು ನಿಘಂಟು ತನ್ನ ಬ್ಲಾಗ್ನಲ್ಲಿ ತಿಳಿಸಿದೆ. ‘ಹೋಮರ್’ ಎಂಬ ಪದವನ್ನು 2022ರ ಮೇ ತಿಂಗಳಿನ ಪ್ರಥಮ ವಾರದಲ್ಲಿ ಸುಮಾರು 75,000 ಬಾರಿ ಸರ್ಚ್ ಮಾಡಲಾಗಿದೆ.

ಇಲ್ಲಿ ಹೋಮರ್ ಎಂದರೆ ಪ್ರಸಿದ್ಧ ಗ್ರೀಕ್ ಸಾಹಿತಿಯ ಹೆಸರಲ್ಲ, ಈ ಪದಕ್ಕೆ ಜಾಗತಿಕ ಆಟ ‘ವರ್ಡ್ಲೆ’ಯಲ್ಲಿ ಅರ್ಥ ದೊರಕಿದೆ. ಆಟಕ್ಕೆ ಸಂಬಂಧಿಸಿ ಹೋಮರ್ ಎಂದರೆ ಹೋಮ್ರನ್ ಎಂಬ ಪದದ ಸಂಕ್ಷಿಪ್ತ ರೂಪ. ಬೇಸ್ಬಾಲ್ ಆಟದಲ್ಲಿ ಬ್ಯಾಟರ್ ಚೆಂಡನ್ನು ಹೊಡೆದ ಬಳಿಕ ಬೇಸ್ಗಳ ಸುತ್ತ ಓಡಿ ಒಂದು ರನ್ ಅನ್ನು ಪೂರ್ತಿಗೊಳಿಸುವುದು. ಮೇ 5ರಂದು ಪ್ರಪಂಚದಾದ್ಯಂತದ ಹಲವು ವ್ಯಕ್ತಿಗಳು ‘ಸೂಕ್ತವಲ್ಲದ ಪದ’ ಬಳಕೆಯಿಂದಾಗಿ ತಮ್ಮ ಗೆಲುವಿನ ಓಟಕ್ಕೆ ತಡೆಯಾಗಿದೆ ಎಂದು ಹತಾಶೆ ವ್ಯಕ್ತಪಡಿಸಿದರು. ಆ ಪದ ‘ಹೋಮರ್’. ಅಮೆರಿಕನ್ನರು ಮಾತ್ರ ಈ ಪದದ ಅರ್ಥವನ್ನು ಸರಿಯಾಗಿ ತಿಳಿದಿದ್ದಾರೆ.

ಅಮೆರಿಕನ್ನರಲ್ಲದ ವೆಬ್ಗೇಮ್ ಆಟಗಾರರಿಗೆ ಈ ಪದದ ಅರ್ಥ ತಿಳಿಯದೆ ಕೇಂಬ್ರಿಡ್ಜ್ ನಿಘಂಟಿನ ಮೊರೆ ಹೋಗಿದ್ದಾರೆ. ಹೀಗೆ ಏಕಾಏಕಿ ಪದದ ಅರ್ಥಕ್ಕಾಗಿ ನಡೆಸಿದ ತೀವ್ರ ಹುಡುಕಾಟದಿಂದಾಗಿ ‘ಹೋಮರ್’ ಎಂಬ ಪದ ವರ್ಷದ ಪದ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ಕೇಂಬ್ರಿಡ್ಜ್ ನಿಘಂಟಿನ ಬ್ಲಾಗ್ನಲ್ಲಿ ಉಲ್ಲೇಖಿಸಲಾಗಿದೆ.

‘ಹೋಮರ್’ ಪದವನ್ನು ವರ್ಷದ ಪದವಾಗಿ ಆಯ್ಕೆ ಮಾಡಿರುವುದು ನಮ್ಮ ಅನೇಕ ಬಳಕೆದಾರರು ಭಾಷೆಯೊಂದಿಗೆ ಆಟವಾಡುವ ಸಂತೋಷವನ್ನು ಮಾತ್ರವಲ್ಲದೆ ಹೆಚ್ಚು ಸಂಪರ್ಕದಲ್ಲಿರುವ ಇಂಗ್ಲಿಷ್ ಕಲಿಯುವ ಸವಾಲುಗಳನ್ನು ಪ್ರತಿನಿಧಿಸುತ್ತದೆ ಎಂದು ಕ್ಯಾಂಬ್ರಿಡ್ಜ್ ನಿಘಂಟು ಪ್ರಕಾಶನದ ವ್ಯವಸ್ಥಾಪಕ ವೆಂಡಾಲಿನ್ ನಿಕೊಲಸ್ ಹೇಳಿದ್ದಾರೆ.

ಬ್ರಿಟಿಷ್ ಹಾಗೂ ಅಮೆರಿಕನ್ ಇಂಗ್ಲಿಷ್ ನಡುವಿನ ವ್ಯತ್ಯಾಸಗಳು ಇಂಗ್ಲಿಷ್ ಕಲಿಯುವವರಿಗೆ ಮಾತ್ರವಲ್ಲ, ಜಾಗತಿಕವಾಗಿ ಇಂಗ್ಲಿಷ್ ಮಾತನಾಡುವವರಿಗೂ ಆಸಕ್ತಿ ಉಂಟು ಮಾಡುತ್ತದೆ. ‘ಹೋಮರ್’ನ ಬಳಿಕದ ವರ್ಷದ ಪದಗಳಾಗಿ ‘ಹ್ಯೂಮರ್’ ‘ಕಾಕ್’, ಟ್ಯಾಸಿಟ್ ಮತ್ತು ಬಯೋವ್ ಸ್ಥಾನ ಪಡೆದಿದೆ ಎಂದವರು ಮಾಹಿತಿ ನೀಡಿದ್ದಾರೆ.

Similar News