ಪಾಕ್: ಕಂದಕಕ್ಕೆ ಉರುಳಿದ ಮಿನಿಬಸ್; 11 ಮಕ್ಕಳ ಸಹಿತ 20 ಮಂದಿ ಮೃತ್ಯು

Update: 2022-11-18 18:15 GMT

ಇಸ್ಲಮಾಬಾದ್, ನ.18: ದಕ್ಷಿಣ ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಗುರುವಾರ ರಾತ್ರಿ ಮಿನಿ ಬಸ್ ಒಂದು ರಸ್ತೆ ಪಕ್ಕದ ಆಳವಾದ ಕಂದಕಕ್ಕೆ ಉರುಳಿಬಿದ್ದು 11 ಮಕ್ಕಳ ಸಹಿತ 20 ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಇತ್ತೀಚೆಗೆ ಸಂಭವಿಸಿದ್ದ ವಿನಾಶಕಾರಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ರಸ್ತೆಯ ಪಕ್ಕದಲ್ಲಿದ್ದ ಆಳವಾದ, ನೀರು ತುಂಬಿದ್ದ ಕಂದಕಕ್ಕೆ ಮಿನಿಬಸ್ ಉರುಳಿದೆ. ಸೆಹ್ವಾನ್ ಶರೀಫ್ ನಗರದ ಬಳಿ  ರಸ್ತೆ ಪಕ್ಕದಲ್ಲಿದ್ದ ಸೂಚನಾ ಫಲಕವನ್ನು ಚಾಲಕ ಗಮನಿಸದ ಕಾರಣ ರಸ್ತೆ ತಿರುವಿನಲ್ಲಿ ಬಸ್ಸು 25 ಅಡಿ ಆಳದ ಕಂದಕಕ್ಕೆ ಧುಮುಕಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಖದಿಮ್ ಹುಸೈನ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಮೃತಪಟ್ಟ ಮಕ್ಕಳು 2ರಿಂದ 8 ವರ್ಷದವರಾಗಿದ್ದು ಬಹುಷಃ ತಮ್ಮ ಹೆತ್ತವರ ತೊಡೆಯಲ್ಲಿ ಕುಳಿತಿರಬಹುದು. ದುರಂತದಲ್ಲಿ 14 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ. ಹದಗೆಟ್ಟ ಹೆದ್ದಾರಿಗಳು ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಪಾಕಿಸ್ತಾನದಲ್ಲಿ ರಸ್ತೆ ಅಪಘಾತ ಮತ್ತು ಸಾವಿನ ಪ್ರಮಾಣ ವಿಪರೀತ ಹೆಚ್ಚಿದೆ. ಪಾಕಿಸ್ತಾನದಲ್ಲಿ  2018ರಲ್ಲಿ ರಸ್ತೆ ಅಪಘಾತದಿಂದ 27,000ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Similar News