×
Ad

ಈ ಘಳಿಗೆಯವರೆಗೆ ದೇವರ ದಯೆಯಿಂದ ಶತ್ರುಗಳನ್ನು ಸೋಲಿಸಲಾಗಿದೆ: ಇರಾನ್

Update: 2022-11-20 22:14 IST

ಟೆಹ್ರಾನ್, ನ.20: ಈ ಘಳಿಗೆಯವರೆಗೆ ದೇವರ ದಯೆಯಿಂದ ಶತ್ರುಗಳನ್ನು ಸೋಲಿಸಲಾಗಿದೆ. ಆದರೆ ಶತ್ರುಗಳು ಪ್ರತೀ ದಿನ ಹೊಸ ತಂತ್ರಗಳನ್ನು ಹೂಡುತ್ತಾರೆ ಮತ್ತು ಈ ಸೋಲಿನಿಂದ ಹತಾಶರಾದ ಅವರು ಕಾರ್ಮಿಕರು ಹಾಗೂ ಮಹಿಳೆಯರನ್ನು ಗುರಿಯಾಗಿಸಬಹುದು ಎಂದು ಇರಾನ್ನ ಪರಮೋಚ್ಛ ಮುಖಂಡ ಅಯತುಲ್ಲಾ ಆಲಿ ಖಾಮಿನೈ ಹೇಳಿದ್ದಾರೆ.

ಪ್ರತಿಭಟನೆಯ ಹೆಸರಲ್ಲಿ ಇರಾನ್ನ ಇಸ್ಲಾಮಿಕ್ ಸರಕಾರವನ್ನು ಉರುಳಿಸಲು ವಿಫಲವಾದ ಬಳಿಕ ದೇಶದ ಶತ್ರುಗಳು ಕಾರ್ಮಿಕರನ್ನು ಸಜ್ಜುಗೊಳಿಸಲು ಪ್ರಯತ್ನಿಸಬಹುದು ಎಂದವರು ಎಚ್ಚರಿಸಿದ್ದಾರೆ.

ಈ ಮಧ್ಯೆ, ಶನಿವಾರ ಇರಾನ್ನ ವಿಶ್ವವಿದ್ಯಾಲಯ ಹಾಗೂ ಕೆಲವು ನಗರಗಳಲ್ಲಿ ಶನಿವಾರ ತೀವ್ರ ಪ್ರತಿಭಟನೆ ನಡೆದಿದೆ. ಟೆಹ್ರಾನ್, ಇಸ್ಫಹಾನ್, ತಬ್ರೀಝ್ ಮತ್ತು ಶಿರಾಝ್ ಸೇರಿದಂತೆ ಪ್ರಮುಖ ನಗರಗಳ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಟನಾಕಾರರು ಧರಣಿ ಮುಷ್ಕರ ನಡೆಸಿದ್ದಾರೆ ಎಂದು ಎಚ್ಆರ್ಎಎನ್ಎ ಸುದ್ಧಿಸಂಸ್ಥೆ ವರದಿ ಮಾಡಿದೆ. ದಿವಂದರೇಹ್ ನಗರದಲ್ಲಿ ಪ್ರತಿಭಟನಾ ನಿರತರ ಮೇಲೆ ಭದ್ರತಾ ಪಡೆ ಗುಂಡು ಹಾರಿಸುತ್ತಿರುವ ವೀಡಿಯೊ ತುಣುಕನ್ನು ಕುರ್ಡಿಶ್ ಸಮುದಾಯದ ಹಕ್ಕುಗಳಿಗೆ ಹೋರಾಟ ನಡೆಸುವ `ಹೆಂಗವ್' ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಪ್ರತಿಭಟನೆಯ ವಿರುದ್ಧದ ಕಾರ್ಯಾಚರಣೆಯಲ್ಲಿ ಶುಕ್ರವಾರದವರೆಗೆ 402 ಪ್ರತಿಭಟನಾಕಾರರು ಹತರಾಗಿದ್ದಾರೆ. ಭದ್ರತಾ ಪಡೆಯ 54 ಸದಸ್ಯರೂ ಹತರಾಗಿದ್ದಾರೆ ಎಂದು ವರದಿಯಾಗಿದೆ. 

Similar News