×
Ad

ಬಾಂಗ್ಲಾ: ಬ್ಲಾಗರ್ ಹತ್ಯೆಯ ಅಪರಾಧಿಗಳು ನ್ಯಾಯಾಲಯದಿಂದ ಪರಾರಿ‌

Update: 2022-11-20 22:22 IST

ಢಾಕ, ನ.20: ಪ್ರಮುಖ ಬಾಂಗ್ಲಾದೇಶಿ-ಅಮೆರಿಕನ್ ಬ್ಲಾಗರ್ ಅವಿಜಿತ್ ರಾಯ್ ಹಾಗೂ ಅವರ ಪ್ರಕಾಶಕರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ನಿಷೇಧಿತ ಸಂಘಟನೆಯ ಇಬ್ಬರು ಸದಸ್ಯರು ಡಾಕಾದ  ನ್ಯಾಯಾಲಯದ ಆವರಣದಿಂದ ರವಿವಾರ ನಾಟಕೀಯ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನಿಷೇಧಿತ ಭಯೋತ್ಪಾದಕ ಸಂಘಟನೆ ಅನ್ಸಾರುಲ್ಲಾ ಬಾಂಗ್ಲಾ ಟೀಂ(ಎಬಿಟಿ)ಯ ಸದಸ್ಯರಾದ ಹಸನ್ ಶಮೀಮ್ ಮತ್ತು ಅಬು ಸಿದ್ಧಿಖ್ ಸೊಹೆಲ್ಗೆ ಬಾಂಗ್ಲಾ ಮೂಲದ ಅಮೆರಿಕದ ಬ್ಲಾಗರ್ ರಾಯ್ ಮತ್ತು ಪ್ರಕಾಶಕ ಫೈಸಲ್ ಅರೆಫಿನ್ ಹತ್ಯೆ ಪ್ರಕರಣದಲ್ಲಿ ಕಳೆದ ವರ್ಷ  ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇಬ್ಬರನ್ನು ಬೇರೆ ಪ್ರಕರಣದ ದೋಷಾರೋಪ ಪಟ್ಟಿಯ ವಿಚಾರಣೆಗಾಗಿ ಢಾಕಾ ನ್ಯಾಯಾಲಯದ ಆವರಣಕ್ಕೆ ಪೊಲೀಸರು ಕರೆ ತಂದಿದ್ದರು. ಆಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಪೊಲೀಸರ ಮೇಲೆ ರಾಸಾಯನಿಕವನ್ನು ಎರಚಿ, ಹೊಗೆ ಬಾಂಬ್ ಸಿಡಿಸಿ ಅಪರಾಧಿಗಳ ಸಹಿತ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಪ್ರಕರಣದ ಬಗ್ಗೆ ಉನ್ನತ ತನಿಖೆಗೆ ಆದೇಶಿಸಲಾಗಿದ್ದು , ದುಷ್ಕರ್ಮಿಗಳನ್ನು ಮರಳಿ ಬಂಧಿಸಲು ದೇಶವ್ಯಾಪಿ ಕಟ್ಟೆಚ್ಚರದ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಅಸಾದುಝಮನ್ ಖಾನ್ ಕಮಲ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

Similar News