ಭೂಗತ ಸ್ಥಾವರದಲ್ಲಿ ಇರಾನ್ ನಿಂದ ಯುರೇನಿಯಂ ಪರಿಷ್ಕರಣೆ: ವರದಿ
ಟೆಹ್ರಾನ್, ನ.22: ಇರಾನಿನ ಫೊರ್ಡೋವ್ (Fordov)ಭೂಗತ ಪರಮಾಣು ಸ್ಥಾವರದಲ್ಲಿ ಯುರೇನಿಯಂ (Uranium)ಅನ್ನು 60% ಪರಿಶುದ್ಧತೆಗೆ ಉತ್ಕೃಷ್ಟಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇರಾನ್ ನಿಂದ ಇನ್ನಷ್ಟು ಸಹಕಾರಕ್ಕೆ ಒತ್ತಾಯಿಸಿದ ವಿಶ್ವಸಂಸ್ಥೆ(HWO) ಪರಮಾಣು ಮೇಲುಸ್ತುವಾರಿ ಘಟಕದ ಆಗ್ರಹಕ್ಕೆ ಇದು ನಮ್ಮ ಪ್ರತಿಕ್ರಿಯೆಯಾಗಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.
ಇರಾನ್ ಈಗಾಗಲೇ ದೇಶದ ಬೇರೆ ಸ್ಥಳಗಳಲ್ಲಿ ಯುರೇನಿಯಂ ಅನ್ನು 60%ದಷ್ಟು ಪರಿಶುದ್ಧತೆಗೆ ಉತ್ಕಷ್ಟಗೊಳಿಸುವ ಕಾರ್ಯ ನಡೆಸುತ್ತಿದೆ. ಇದು ಪರಮಾಣು ಅಸ್ತ್ರದ ಮಟ್ಟವಾದ 90%ಕ್ಕಿಂತ ಕಡಿಮೆಯಾಗಿದ್ದರೂ 2015ರಲ್ಲಿ ಪರಮಾಣು ಶಸ್ತ್ರ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕೂ ಮುನ್ನ ಇದ್ದ 20% ಮಿತಿಗಿಂತ ಹೆಚ್ಚಾಗಿದೆ.
`ಫೊರ್ಡೋವ್ ಭೂಗತ ಸ್ಥಾವರದಲ್ಲಿ ಯುರೇನಿಯಂ ಅನ್ನು 60% ಪರಿಶುದ್ಧತೆಗೆ ಉತ್ಕøಷ್ಟಗೊಳಿಸುವ ಕಾರ್ಯ ಆರಂಭವಾಗಿದೆ. ಐಎಇಎ ಅಂಗೀಕರಿಸಿದ ಇತ್ತೀಚೆಗಿನ ನಿರ್ಣಯಕ್ಕೆ ಇದು ನಮ್ಮ ಪ್ರಬಲ ಪ್ರತಿಕ್ರಿಯೆಯಾಗಿದೆ' ಎಂದು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ)ಗೆ ಬರೆದಿರುವ ಪತ್ರದಲ್ಲಿ ಇರಾನ್ ಮಾಹಿತಿ ನೀಡಿರುವುದಾಗಿ ಐಎಸ್ಎನ್ಎ ಸುದ್ಧಿಸಂಸ್ಥೆ ವರದಿ ಮಾಡಿದೆ. ಇರಾನ್ನ 3 ಪರಮಾಣು ಸ್ಥಾವರಗಳಲ್ಲಿ ಯುರೇನಿಯಂನ ಕುರುಹು ಪತ್ತೆಯಾಗಿರುವುದಕ್ಕೆ ಸಂಬಂಧಿಸಿ ನಡೆಸುವ ಪರಿಶೀಲನೆಯಲ್ಲಿ ಐಎಇಎ ಜತೆ ತುರ್ತು ಸಹಕರಿಸುವಂತೆ ಇರಾನ್ ಅನ್ನು ಆಗ್ರಹಿಸುವ ನಿರ್ಣಯವನ್ನು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ 35 ಸದಸ್ಯ ದೇಶಗಳ ಆಡಳಿತ ಮಂಡಳಿ ಗುರುವಾರ ಅಂಗೀಕರಿಸಿದೆ.