ರಶ್ಯ ಭಯೋತ್ಪಾದನೆಯ ಪ್ರಾಯೋಜಕ ದೇಶ :ಇಯು ಪಾರ್ಲಿಮೆಂಟ್ ಘೋಷಣೆ

Update: 2022-11-23 17:15 GMT

ಸ್ಟ್ರಾಸ್‌ಬರ್ಗ್(ಫ್ರಾನ್ಸ್), ನ.23: ರಶ್ಯವನ್ನು ‘ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ದೇಶ’ ('Country sponsoring terrorism')ಎಂದು ಹೆಸರಿಸುವ ನಿರ್ಣಯವನ್ನು ಯುರೋಪಿಯನ್ ಯೂನಿಯನ್‌ನ ಪಾರ್ಲಿಮೆಂಟ್ ಬುಧವಾರ ಅಂಗೀಕರಿಸಿದೆ ಎಂದು ವರದಿಯಾಗಿದೆ. ರಶ್ಯವು ಇಂಧನ ಮೂಲಸೌಕರ್ಯ, ಆಸ್ಪತ್ರೆಗಳು, ಶಾಲೆಗಳು ಹಾಗೂ ಆಶ್ರಯತಾಣಗಳ ಮೇಲೆ ನಡೆಸುತ್ತಿರುವ ದಾಳಿಯು ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿರುವುದರಿಂದ ಆ ದೇಶವನ್ನು ಭಯೋತ್ಪಾದನೆ ಪ್ರಾಯೋಜಕ ದೇಶವೆಂದು ನಿಯೋಜಿಸಿರುವುದಾಗಿ ಯುರೋಪಿಯನ್ ಯೂನಿಯನ್ ಘೋಷಿಸಿದೆ.

ಆದರೆ, ಈ ಘೋಷಣೆಗೆ ಪೂರಕ ಕ್ರಮ ಕೈಗೊಳ್ಳಲು ಯುರೋಪಿಯನ್ ಯೂನಿಯನ್ ಯಾವುದೇ ಕಾನೂನು ಚೌಕಟ್ಟನ್ನು ಹೊಂದಿರದ ಕಾರಣ ಈ ನಡೆಯು ಬಹುತೇಕ ಸಾಂಕೇತಿಕವಾಗಿದೆ. ಉಕ್ರೇನ್ ಮೇಲಿನ ಆಕ್ರಮಣದ ಬಳಿಕ ಯುರೋಪಿಯನ್ ಯೂನಿಯನ್ ರಶ್ಯದ ವಿರುದ್ಧ ಅಸಾಮಾನ್ಯ ನಿರ್ಬಂಧಗಳನ್ನು ವಿಧಿಸಿದೆ.

ಯುರೋಪಿಯನ್ ಯೂನಿಯನ್‌ನ 4 ಸದಸ್ಯ ದೇಶಗಳಾದ ಲಿಥುವೇನಿಯಾ, ಲಾತ್ವಿಯಾ, ಎಸ್ತೋನಿಯಾ ಮತ್ತು ಪೋಲ್ಯಾಂಡ್ ಈಗಾಗಲೇ ರಶ್ಯವನ್ನು ಭಯೋತ್ಪಾದನೆಯ ಪ್ರಾಯೋಜಕ ದೇಶವೆಂದು ಹೆಸರಿಸಿವೆ.  ಈ ಮಧ್ಯೆ, ರಶ್ಯವು ಭಯೋತ್ಪಾದನೆಯ ಪ್ರಾಯೋಜಕ ದೇಶವೆಂದು ಘೋಷಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ (Volodymyr Zelensky)ಮತ್ತೆ ಅಮೆರಿಕವನ್ನು ಆಗ್ರಹಿಸಿದ್ದಾರೆ.

ಆದರೆ ಇದನ್ನು ಅಮೆರಿಕ ನಿರಾಕರಿಸಿದೆ. ಅಮೆರಿಕದ ವಿದೇಶಾಂಗ ಇಲಾಖೆ ಹೆಸರಿಸಿರುವ ‘ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ದೇಶ’ಗಳ ಪಟ್ಟಿಯಲ್ಲಿ ಕ್ಯೂಬಾ, ಉತ್ತರ ಕೊರಿಯಾ, ಇರಾನ್ ಮತ್ತು ಸಿರಿಯಾ ದೇಶಗಳಿವೆ.

Similar News