ಚಂದ್ರನಲ್ಲಿ ಪರಮಾಣುಶಕ್ತ ನಿಲ್ದಾಣ ಸ್ಥಾಪನೆಗೆ ಚೀನಾ ಚಿಂತನೆ
ಬೀಜಿಂಗ್, ನ.26: ಚಂದ್ರನಲ್ಲಿ ಗಗನಯಾತ್ರಿಗಳನ್ನು ಇಳಿಸುವುದಕ್ಕೂ ಮುನ್ನ, 2028ರೊಳಗೆ ಚಂದ್ರನಲ್ಲಿ ತನ್ನ ಪ್ರಥಮ ನೆಲೆ (ನಿಲ್ದಾಣ) ಸ್ಥಾಪನೆಗೆ ಚೀನಾ ಯೋಜನೆ ರೂಪಿಸಿದೆ ಎಂದು ಚೀನಾದ ಚಂದ್ರನ ಪರಿಶೋಧನಾ ಕಾರ್ಯಕ್ರಮದ ಮುಖ್ಯ ವಿನ್ಯಾಸಕ ವು ವಿಯೆರಾನ್ (Vieron)ಹೇಳಿದ್ದಾರೆ.
ಬಾಹ್ಯಾಕಾಶ ಪರಿಶೋಧನೆಯಲ್ಲಿ ಅಮೆರಿಕದ ನಾಸಾದ ಪ್ರಾಬಲ್ಯಕ್ಕೆ ಸವಾಲೆಸೆಯಲು ನಾವು ಸಿದ್ಧರಾಗಿದ್ದೇವೆ. ಚಂದ್ರನಲ್ಲಿ ನಾವು ನಿರ್ಮಿಸಲಿರುವ ನಿಲ್ದಾಣಕ್ಕೆ ಪರಮಾಣು ಇಂಧನ ಶಕ್ತಿ ತುಂಬಲಿದೆ. ಇದರ ಮೂಲಸಂರಚನೆಯು ಲ್ಯಾಂಡರ್, ಹಾಪರ್, ಆರ್ಬಿಟರ ಮತ್ತು ರೋವರ್ ಅನ್ನು ಒಳಗೊಂಡಿರುತ್ತದೆ. ನಮ್ಮ ಗಗನಯಾತ್ರಿಗಳು 10 ವರ್ಷದೊಳಗೆ ಚಂದ್ರನಲ್ಲಿ ಕಾಲಿಡಲಿದ್ದಾರೆ ಎಂದವರು ಹೇಳಿದ್ದಾರೆ.
ಚೀನಾ ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ತನ್ನ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಹೆಚ್ಚಿಸಿದೆ. ಚಂದ್ರನಲ್ಲಿಗೆ ಶೋಧಕಗಳ ರವಾನೆ, ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣದ ಜತೆ ಮಂಗಳನತ್ತಲೂ ದೃಷ್ಟಿಯನ್ನು ನೆಟ್ಟಿದೆ.
ಚೀನಾ ಮತ್ತು ಅಮೆರಿಕ ಎರಡೂ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ, ಅಲ್ಲಿಂದ ಸಂಪನ್ಮೂಲಗಳನ್ನು ಪ್ರಯೋಗಾಲಯಕ್ಕೆ ರವಾನಿಸಿ ಚಂದ್ರನಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ಕೋಟ್ಯಾಂತರ ಡಾಲರ್ ವೆಚ್ಚ ಮಾಡುತ್ತಿವೆ.