ಮೆಸ್ಸಿ ಆಟವನ್ನು ನೋಡಲು ಕಾರಿನಲ್ಲಿ ಕೇರಳದ ಮಹಿಳೆಯ ಖತರ್ ಯಾನ

Update: 2022-11-26 17:39 GMT

ದುಬೈ, ನ. 26: ತನ್ನ ಹೀರೊ ಮೆಸ್ಸಿ (Messi)ಮತ್ತು ಅವರ ತಂಡ ಅರ್ಜೆಂಟೀನ ಫಿಫಾ ವಿಶ್ವಕಪ್‌ನಲ್ಲಿ ಆಡುವುದನ್ನು ನೋಡಲು ಕೇರಳದ ಮಹಿಳೆಯೊಬ್ಬರು ಏಕಾಂಗಿಯಾಗಿ ಕಾರಿನಲ್ಲಿ ಖತರ್‌ಗೆ ಪ್ರಯಾಣಿಸಿದ್ದಾರೆ.

ಐವರು ಮಕ್ಕಳ ತಾಯಿ ನಾಜಿ ನೌಶಿ ಕೊಲ್ಲಿ ದೇಶಗಳ ತನ್ನ ಪ್ರವಾಸವನ್ನು ಅಕ್ಟೋಬರ್ 15ರಂದು ಆರಂಭಿಸಿದ್ದಾರೆ. ಈಗ ಅವರು ಯುಎಇಗೆ ಆಗಮಿಸಿದ್ದಾರೆ ಎಂದು ‘ಖಲೀಜ್ ಟೈಮ್ಸ್’ (Khaleej Times)ಪತ್ರಿಕೆ ವರದಿ ಮಾಡಿದೆ.

ಸೌದಿ ಅರೇಬಿಯ ವಿರುದ್ಧದ ಆರಂಭಿಕ ಪಂದ್ಯದಲ್ಲಿ ತನ್ನ ನೆಚ್ಚಿನ ತಂಡವು ಸೋತಿರುವ ಬಗ್ಗೆ ಆಘಾತಗೊಂಡಿರುವ 33 ವರ್ಷದ ಮಹಿಳೆ, ಮುಂದಿನ ಪಂದ್ಯದಲ್ಲಿ ಅರ್ಜೆಂಟೀನ ಪುಟಿದೇಳುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಈ ವಾರದ ಆರಂಭದಲ್ಲಿ ಅರ್ಜೆಂಟೀನವು ಸೌದಿ ಅರೇಬಿಯ ವಿರುದ್ಧ 1-2 ಗೋಲುಗಳ ಅಂತರದಿಂದ ಸೋತಿದೆ. ತನ್ನ ಮುಂದಿನ ಪಂದ್ಯದಲ್ಲಿ ಅದು ರವಿವಾರ ಮೆಕ್ಸಿಕೊ ತಂಡವನ್ನು ಎದುರಿಸಲಿದೆ. ‘‘ನಾನು ನನ್ನ ಹೀರೊ ಲಿಯೊನೆಲ್ ಮೆಸ್ಸಿ ಆಡುವುದನ್ನು ನೋಡಬೇಕು ಅಷ್ಟೆ. ಅವರ ತಂಡವು ಸೌದಿ ಅರೇಬಿಯ ವಿರುದ್ಧ ಸೋತಿರುವುದರಿಂದ ನಾನು ನೊಂದಿದ್ದೇನೆ. ಆದರೆ, ಅದು ವಿಶ್ವಕಪ್ ಎತ್ತುವ ಅವರ ಹಾದಿಯಲ್ಲಿ ಎದುರಾದ ಒಂದು ಸಣ್ಣ ಅಡಚಣೆಯಷ್ಟೆ’’ ಎಂದು ‘ಖಲೀಜ್ ಟೈಮ್ಸ್’ ನೊಂದಿಗೆ ಮಾತನಾಡಿದ ಅವರು ಹೇಳಿದರು.

 ಕಾರಿನ ಜೊತೆಗೆ ಮುಂಬೈನಿಂದ ಹಡಗಿನಲ್ಲಿ ಒಮಾನ್‌ಗೆ ಬಂದಿದ್ದಾರೆ. ಅವರು ಮಸ್ಕತ್‌ನಿಂದ ತನ್ನ ಕೊಲ್ಲಿ ಪ್ರಯಾಣವನ್ನು ಕಾರಿನಲ್ಲಿ ಆರಂಭಿಸಿ ಹಟ್ಟಾ ಗಡಿ ಮೂಲಕ ಯುಎಇ ತಲುಪಿದ್ದಾರೆ. ಅವರು ತನ್ನ ಕಾರಿಗೆ ‘ಊಳು’ ('village')(ಮಲಯಾಳಮ್‌ನಲ್ಲಿ ‘ಅವಳು’ ಎಂಬ ಅರ್ಥ) ಎಂಬ ಹೆಸರಿಟ್ಟಿದ್ದಾರೆ.

Similar News