ಫಿಫಾ ವಿಶ್ವಕಪ್: ಬ್ರೂನೊ ಫೆರ್ನಾಂಡಿಸ್ ಅವಳಿ ಗೋಲು; 16ರ ಘಟ್ಟಕ್ಕೆ ಪೋರ್ಚ್‌ ಗಲ್‌

Update: 2022-11-29 02:16 GMT

ಹೊಸದಿಲ್ಲಿ: ಮಿಡ್‍ಫೀಲ್ಡರ್ ಬ್ರೂನೊ ಫೆರ್ನಾಂಡಿಸ್ (Midfielder Bruno Fernandes) ಅವರ ಅಮೋಘ 2 ಗೋಲುಗಳ ನೆರವಿನಿಂದ ಉರುಗ್ವೆ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಪೋರ್ಚ್‌ ಗಲ್‌  (Portugal beat Uruguay 2-0) ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ (FIFA World Cup 2022) ಅಂತಿಮ 16 ಘಟ್ಟಕ್ಕೆ ಮುನ್ನಡೆದಿದೆ.

ಮಂಗಳವಾರ ನಡೆದ ಎಚ್ ಗುಂಪಿನ 2ನೇ ಪಂದ್ಯದಲ್ಲಿ ಜಯ ಸಾಧಿಸಿದ್ದರಿಂದ ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ ಪೋರ್ಚ್‌ ಗಲ್‌ ಮುಂದಿನ ಹಂತಕ್ಕೆ ತೇರ್ಗಡೆಯಾಯಿತು. ಈಗಾಗಲೇ ಫ್ರಾನ್ಸ್ ಹಾಗೂ ಬ್ರೆಝಿಲ್ ನಾಕೌಟ್ ಹಂತಕ್ಕೆ ಮುನ್ನಡೆದಿವೆ.

ಹೀಗೆ ಗುಂಪು ಹಂತದ ಪಂದ್ಯಗಳ ಎರಡು ಸುತ್ತುಗಳ ಬಳಿಕ ಮೂರು ತಂಡಗಳು ಅಂತಿಮ 16ರ ಘಟ್ಟ ತಲುಪಿವೆ. ಉಳಿದ 27 ತಂಡಗಳ ಭವಿಷ್ಯ ಮೂರನೇ ಸುತ್ತಿನ ಪಂದ್ಯಗಳ ಬಳಿಕ ನಿರ್ಧಾರವಾಗಲಿದ್ದು, 13 ಸ್ಥಾನಗಳಿಗೆ ಹೋರಾಟ ನಡೆಯಲಿದೆ. ಈಗಾಗಲೇ ಅತಿಥೇಯ ಕತರ್ ಹಾಗೂ ಕೆನಡಾ ಟೂರ್ನಿಯಿಂದ ನಿರ್ಗಮಿಸಿವೆ.

ಮೊದಲಾರ್ಧ ಗೋಲು ರಹಿತವಾಗಿ ಅಂತ್ಯಗೊಂಡ ಬಳಿಕ 54ನೇ ನಿಮಿಷದಲ್ಲಿ ಫೆರ್ನಾಂಡಿಸ್ ಪೋರ್ಚ್‌ ಗಲ್‌  ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಮೊದಲು ಕ್ರಿಸ್ಟಿಯಾನೊ ರೊನಾಲ್ಡೊ ಈ ಗೋಲು ಕ್ಲೇಮ್ ಮಾಡಿದ್ದರು. ಆರು ಯಾರ್ಡ್‍ಗಳ ಪೆಟ್ಟಿಗೆ ಬಳಿ ಮೇಲಕ್ಕೆ ಜಿಗಿದ ರೊನಾಲ್ಡೊ, ಫೆರ್ನಾಂಡಿಸ್ ಅವರ ಕ್ರಾಸ್ ಹೊಡೆತವನ್ನು ನಿಯಂತ್ರಣಕ್ಕೆ ಪಡೆಯುವ ಯತ್ನ ಮಾಡಿದರಾದರೂ, ಯಾವ ಸ್ಪರ್ಶವೂ ಇಲ್ಲದೇ ಚೆಂಡು ಗೋಲುಪೆಟ್ಟಿಗೆ ಸೇರಿತು. ಪಂದ್ಯ ಅಂತ್ಯದ ವೇಳೆಗೆ ಪೆನಾಲ್ಟಿ ಮೂಲಕ ಫರ್ನಾಂಡಿಸ್ ಎರಡನೇ ಗೋಲು ಗಳಿಸಿ ಗೆಲುವಿನ ಅಂತರ ಹಿಗ್ಗಿಸಿದರು.

ಎರಡು ಪಂದ್ಯಗಳಿಂದ ಆರು ಅಂಕ ಪಡೆದ ಪೋರ್ಚ್‌ ಗಲ್‌  ನೇರವಾಗಿ ಮುಂದಿನ ಹಂತಕ್ಕೆ ರಹದಾರಿ ಪಡೆದರೆ, ಮೂರು ಅಂಕ ಹೊಂದಿರುವ ಉರುಗ್ವೇ ಈ ಸಾಧನೆ ಮಾಡಲು ಶುಕ್ರವಾರ ನಡೆಯುವ ಪಂದ್ಯದಲ್ಲಿ ಘಾನಾ ವಿರುದ್ಧ ಗೆಲುವು ಸಾಧಿಸಬೇಕಾಗಿದೆ. ಪೋರ್ಚ್‌ ಗಲ್‌ ಶುಕ್ರವಾರ ದಕ್ಷಿಣ ಕೊರಿಯಾ ವಿರುದ್ಧ ಆಡಲಿದ್ದು, ಕೊರಿಯಾಗೆ ಕೂಡಾ ಇದು ನಿರ್ಣಾಯಕ ಪಂದ್ಯ.

Similar News