ಸೌದಿ ಅರೇಬಿಯಾವನ್ನು ಸೋಲಿಸಿದರೂ ಫಿಫಾ ವಿಶ್ವಕಪ್‌ನಿಂದ ಹೊರಬಿದ್ದ ಮೆಕ್ಸಿಕೊ

Update: 2022-12-01 01:52 GMT

ಲುಸೈಲ್: ಕೇವಲ ಐದು ಸೆಕೆಂಡ್‍ಗಳ ಅಂತರದಲ್ಲಿ ಎರಡು ಗೋಲುಗಳನ್ನು ಸಿಡಿಸಿ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಹದಿನಾರರ ಘಟ್ಟಕ್ಕೆ ಮುನ್ನಡೆಯಲು ಹರಸಾಹಸ ನಡೆಸಿದ ಮೆಕ್ಸಿಕೊಗೆ ಕೊನೆಗೂ ಅದೃಷ್ಟ ಕೈಕೊಟ್ಟಿತು. ಬುಧವಾರ ನಡೆದ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದರೂ, ಗೋಲು ವ್ಯತ್ಯಾಸ ಆಧಾರದಲ್ಲಿ ಟೂರ್ನಿಯಿಂದ ಹೊರಬಿದ್ದಿತು.

ಮಧ್ಯಂತರ ವಿರಾಮದ ಬಳಿಕ ಹೆನ್ರಿ ಮಾರ್ಟಿನ್ ಮತ್ತು ಲೂಯಿಸ್ ಚವೇಸ್ ಅವರು ಎರಡು ಗೋಲುಗಳನ್ನು ಬಾರಿಸಿ ಸ್ಪರ್ಧೆಯಲ್ಲಿ ಮುಂದುವರಿಯುವ ಆಸೆಯನ್ನು ಜೀವಂತವಾಗಿರಿಸಿದರು. ಆದರೆ ಸೌದಿ ಗೋಲ್‍ಕೀಪರ್ ಮೊಹ್ಮದ್ ಅಲ್ ಒವಾಯಿಸ್ ಅವರು ಅದ್ಭುತವಾಗಿ ಗೋಲುಗಳನ್ನು ತಡೆದರು.

ಸಿ ಗುಂಪಿನಲ್ಲಿ ಪೋಲಂಡ್‍ಗಿಂತ ಮೇಲುಗೈ ಸಾಧಿಸಲು ಮೆಕ್ಸಿಕೊಗೆ ಇಂದಿನ ಪಂದ್ಯ ನಿರ್ಣಾಯಕವಾಗಿತ್ತು. ಹೆಚ್ಚಿನ ಹಳದಿ ಕಾರ್ಡ್‍ಗಳನ್ನು ಹೊಂದಿದ ಕಾರಣಕ್ಕಾಗಿ ಮೆಕ್ಸಿಕೊ ನಿರ್ಗಮಿಸುವ ಸಾಧ್ಯತೆ ಇತ್ತು. ಆದರೆ ಸೌದಿ ಅರೇಬಿಯಾದ ಸಲೀಂ ಅಲ್ ದೌಸಾರಿ ಹೊಡೆದ ಗೋಲಿನಿಂದಾಗಿ, ಮೆಕ್ಸಿಕೊ ಹಾಗೂ ಪೋಲಂಡ್ ತಂಡಗಳ ಗೋಲು ಅಂತರ ನಿರ್ಣಾಯಕ ಎನಿಸಿತು.

ಇಂದಿನ ಫಲಿತಾಂಶದಿಂದಾಗಿ ಸತತ ಏಳು ವಿಶ್ವಕಪ್‍ಗಳ 16ರ ಘಟ್ಟದಲ್ಲಿ ಕಾಣಿಸಿಕೊಂಡಿದ್ದ ಈ ಬಲಿಷ್ಠ ತಂಡದ ಅಭಿಯಾನ ಅಂತ್ಯವಾಯಿತು. ಅಂತೆಯೇ ಸೌದಿ ಅರೇಬಿಯಾ ಪಾಲಿಗೂ 28 ವರ್ಷಗಳಲ್ಲಿ ಮೊದಲ ಬಾರಿಗೆ ಗುಂಪು ಹಂತದಿಂದ ಮುನ್ನಡೆಯುವ ಆಸೆ ನುಚ್ಚು ನೂರಾಯಿತು. ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ 0-2 ಗೋಲುಗಳಿಂದ ಸೋತರೂ ಪೋಲಂಡ್ ಗೋಲು ಅಂತರ ಆಧಾರದಲ್ಲಿ ಮುನ್ನಡೆಯಿತು.

Similar News