ಫಿಫಾ ವಿಶ್ವಕಪ್: ಪೋಲಂಡ್ ವಿರುದ್ಧ ಅರ್ಜೆಂಟೀನಾ ತಂಡಕ್ಕೆ ಜಯ

ನಾಕೌಟ್ ಹಂತ ತಲುಪಿದ ಮೆಸ್ಸಿ ಪಡೆ

Update: 2022-12-01 02:25 GMT

ದೋಹಾ: ಇಲ್ಲಿನ ಸ್ಟೇಡಿಯಂ 974ನಲ್ಲಿ ಬುಧವಾರ ನಡೆದ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಪೋಲಂಡ್ ವಿರುದ್ಧ 2-0 ಗೋಲುಗಳ ಜಯ ಸಾಧಿಸಿದ ಲಿಯೊನಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ನಾಕೌಟ್ ಹಂತ ತಲುಪಿದೆ.

16ರ ಘಟ್ಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಜೆಂಟೀನಾ ಸೆಣೆಸಲಿದೆ.

ಮೊದಲಾರ್ಧದಲ್ಲಿ ಮೆಸ್ಸಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದರೆ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಹಾಗೂ ಜ್ಯೂಲಿಯನ್ ಅಲ್ವೆರೆಸ್, ದಕ್ಷಿಣ ಅಮೆರಿಕನ್ ತಂಡವನ್ನು ಆರು ಅಂಕಗಳೊಂದಿಗೆ ಗುಂಪಿನ ಅಗ್ರಸ್ಥಾನಿಯಾಗಿ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ನೆರವಾದರು.

ಸೋಲಿನ ಹೊರತಾಗಿಯೂ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿದ ಪೋಲಂಡ್ ಕೂಡಾ ನಾಕೌಟ್ ಹಂತದಲ್ಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸುವ ಅರ್ಹತೆ ಸಂಪಾದಿಸಿತು.

ಮೊದಲಾರ್ಧದಲ್ಲಿ ಉಭಯ ತಂಡಗಳಿಂದ ಸಮಬಲದ ಪ್ರದರ್ಶನ ಕಂಡುಬಂದರೂ, ಎರಡನೇ ಅರ್ಧದಲ್ಲಿ ಒಂದು ನಿಮಿಷ ಬಾಕಿ ಇರುವಾಗ ಅರ್ಜೆಂಟೀನಾ ಮುನ್ನಡೆ ಗಳಿಸಿತು. ನಹೂಲ್ ಮೊಲಿನಾ ಅವರ ಕ್ರಾಸ್ ಹೊಡೆತವನ್ನು ಅಲಿಸ್ಟರ್ ಗೋಲಾಗಿ ಪರಿವರ್ತಿಸಿದರು. ದುರ್ಬಲ ಸಂಪರ್ಕದ ಹೊರತಾಗಿಯೂ, ಚೆಂಡು ಪೋಲಂಡ್ ಕೀಪರ್ ವೊಜಿಸಿಯೆಚ್ ಸ್ಕೆಝೆನ್ಸಿ ಅವರನ್ನು ವಂಚಿಸಿತು. ಜ್ಯೂಲಿಯನ್ ಅಲ್ವೆರೆಝ್ ಅವರ ಗೋಲು ಗೆಲುವಿನ ಅಂತರವನ್ನು ಹೆಚ್ಚಿಸಿತು. ಇದಕ್ಕೂ ಮುನ್ನ ವಿವಾದಾತ್ಮಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ಮೆಸ್ಸಿ ವಿಫಲವಾದದ್ದು ಅರ್ಜೆಂಟೀನಾ ಅಭಿಮಾನಿಗಳಿಗೆ ನಿರಾಸೆ ತಂದಿತು.

Similar News