ಫಿಫಾ ವಿಶ್ವಕಪ್‍ನಲ್ಲಿ ಮತ್ತೆ ಜಪಾನ್ ಘರ್ಜನೆ: ಅಗ್ರಸ್ಥಾನಿಯಾಗಿ ನಾಕೌಟ್‍ಗೆ ಪ್ರವೇಶ

Update: 2022-12-02 03:56 GMT

ದೋಹಾ: ಫಿಫಾ ವಿಶ್ವಕಪ್‍ನಲ್ಲಿ ಮೊದಲ ಬಾರಿಗೆ ಏಷ್ಯನ್ ತಂಡವೊಂದು ಮತ್ತೆ ಘರ್ಜಿಸಿದೆ. ಕತರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ 2010ರ ಚಾಂಪಿಯನ್ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಜಪಾನ್, ಟೂರ್ನಿಯಲ್ಲಿ ಎರಡನೇ ಅಚ್ಚರಿಯ ಜಯ ದಾಖಲಿಸಿ, ಇ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿದೆ.

ಜಪಾನ್ ವಿರುದ್ಧ ಸೋತರೂ ಸ್ಪೇನ್, ಜರ್ಮನಿ ವಿರುದ್ಧ ಉತ್ತಮ ಗೋಲು ಅಂತರ ಆಧಾರದಲ್ಲಿ ಮೇಲುಗೈ ಸಾಧಿಸಿ ಅಂತಿಮ 16ರ ಘಟ್ಟ ತಲುಪಿದೆ.

ವಿರಾಮದ ವೇಳೆಗೆ 0-1 ಹಿನ್ನಡೆಯಲ್ಲಿದ್ದ ತಂಡಕ್ಕೆ ಕೋಚ್ ಹಜಿಮಿ ಮೊರಿಯಾಸು ಸ್ಫೂರ್ತಿ ತುಂಬಿ ಹೆಚ್ಚು ಆಕ್ರಮಣಕಾರಿ ಆಟಕ್ಕೆ ಸೂಚನೆ ನೀಡಿದರು. ಪವಾಡ ಸದೃಶ ಹೋರಾಟ ಸಂಘಟಿಸಿದ ಜಪಾನೀಯರು ಆರು ನಿಮಿಷದಲ್ಲೇ ಮುನ್ನಡೆ ಸಾಧಿಸಿ ಪಂದ್ಯ ಗೆಲ್ಲಲು ಸಾಧ್ಯವಾಯಿತು.

48ನೇ ನಿಮಿಷದಲ್ಲಿ ಬದಲಿ ಆಟಗಾರ ರಿತ್ಸು ಡೋವನ್ ಮೈದಾನದ ಅಂಚಿನಿಂದ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿ ತಂಡ ಸಮಬಲ ಸಾಧಿಸಲು ನೆರವಾದರು. ಇದಾದ ಮೂರೇ ನಿಮಿಷದಲ್ಲಿ ಆವೊ ಟನಕ, ಕವೊರು ಮಿಟೋಮಾ ಅವರ ಹೊಡೆತವನ್ನು ತೀರಾ ಸನಿಹದಿಂದ ಗೋಲಾಗಿ ಪರಿವರ್ತಿಸಿದರು. ಮಿಟೋಮಾ ಚೆಂಡನ್ನು ಪ್ರದರ್ಶಿಸುವ ಮುನ್ನ ಚೆಂಡು ಅಂಚಿನಿಂದ ಹೊರಹೋಗಿಲ್ಲ ಎನ್ನುವುದನ್ನು ದೃಢಪಡಿಸಲು ವಿಎಆರ್ ಸಿಸ್ಟಂ ಹಲವು ನಿಮಿಷಗಳನ್ನು ತೆಗೆದುಕೊಂಡಿತು.

ಮೊದಲಾರ್ಧದಲ್ಲಿ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದ್ದ ಸ್ಪೇನ್, ದಿಢೀರನೇ ವಿಶ್ವಕಪ್‍ನಲ್ಲಿ ಮುಂದುವರಿಯುವ ತಮ್ಮ ಅವಕಾಶಕ್ಕೆ ಅಂಟಿಕೊಂಡಿತು. ಇ ಗುಂಪಿನ ಮತ್ತೊಂದು ಪಂದ್ಯದಲ್ಲಿ ನಾಕೌಟ್ ಹಂತಕ್ಕೆ ಮುನ್ನಡೆಯಲು ಕೋಸ್ಟರಿಕ ಹಾಗೂ ಜರ್ಮನಿ ಹೋರಾಟ ನಡೆಸಿದರೂ ಉಭಯ ತಂಡಗಳು ಟೂರ್ನಿಯಿಂದ ನಿರ್ಗಮಿಸಿದವು.

ಇದಕ್ಕೂ ಮುನ್ನ ಸ್ಪೇನ್ ಆಟಗಾರ ಅಲ್ವರೊ ಮೊರಾಟಾ ಕತರ್‌ನಲ್ಲಿ ಮೂರನೇ ಗೋಲು ಗಳಿಸಿ ಸ್ಪೇನ್‍ಗೆ ಆರಂಭಿಕ ಮುನ್ನಡೆ ದೊರಕಿಸಿಕೊಟ್ಟಿದ್ದರು. 11ನೇ ನಿಮಿಷದಲ್ಲೇ ಜಪಾನ್‍ನ ರಕ್ಷಣಾ ಕೋಟೆಯನ್ನು ಭೇದಿಸಿ ಆಕರ್ಷಕ ಹೆಡ್ಡರ್ ಮೂಲಕ ಗೋಲುಕೀಪರ್ ಶೂಚಿ ಗೊಂಡಾ ಅವರನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.

Similar News