ಅಮೆರಿಕ: ವಿದ್ಯಾರ್ಥಿಗಳ ಸಾಲಮನ್ನಾ ಯೋಜನೆಯ ತಡೆ ತೆರವಿಗೆ ಸುಪ್ರೀಂಕೋರ್ಟ್ ನಕಾರ

Update: 2022-12-02 16:22 GMT

ವಾಷಿಂಗ್ಟನ್, ಡಿ.2: ವಿದ್ಯಾರ್ಥಿಗಳ ಸಾಲದಲ್ಲಿ ನೂರಾರು ದಶಲಕ್ಷ ಡಾಲರ್ ಸಾಲವನ್ನು ಮನ್ನಾಗೊಳಿಸುವ ಅಧ್ಯಕ್ಷ ಜೋ ಬೈಡನ್(Joe Biden) ಅವರ ಮಹತ್ವಾಕಾಂಕ್ಷೆಯ ಯೋಜನೆಯ ಕಾನೂನುಬದ್ದತೆ ಬಗ್ಗೆ ತೀರ್ಪು ನೀಡಲು ಅಮೆರಿಕದ ಸುಪ್ರೀಂಕೋರ್ಟ್ (US Supreme Court)ಗುರುವಾರ ಒಪ್ಪಿಕೊಂಡಿದೆ. ಆದರೆ, ಈ ಯೋಜನೆಗೆ ತಡೆಯಾಜ್ಞೆ ವಿಧಿಸಿರುವ ಕೆಳ ನ್ಯಾಯಾಲಯದ ಆದೇಶ ತೆರವುಗೊಳಿಸಲು ನಿರಾಕರಿಸಿದೆ.

ಯೋಜನೆಯ ಕಾನೂನುಬದ್ಧತೆಯ ಬಗ್ಗೆ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಅಮೆರಿಕನ್ ನರ ಮೇಲಿನ ವಿದ್ಯಾರ್ಥಿಗಳ ಸಾಲದ ಹೊರೆಯನ್ನು ಕಡಿಮೆಗೊಳಿಸುವ ಮತ್ತು ಈ ಮೂಲಕ ಮಧ್ಯಮ ವರ್ಗದವರಿಗೆ ಉತ್ತೇಜನ ನೀಡುವ ಸಾಲಮನ್ನಾ ಯೋಜನೆಯನ್ನು ಡೆಮೊಕ್ರಟಿಕ್ ಮುಖಂಡ ಬೈಡನ್ ಕಳೆದ ಆಗಸ್ಟ್ ನಲ್ಲಿ ಪ್ರಸ್ತಾವಿಸಿದ್ದರು. ಈ ಯೋಜನೆಯ ಪ್ರಕಾರ, ಫೆಡರಲ್ ಸರಕಾರ ಪ್ರತಿಯೊಬ್ಬ ವಿದ್ಯಾರ್ಥಿಯ 20,000 ಡಾಲರ್ವರೆಗಿನ ಸಾಲವನ್ನು ಮನ್ನಾ ಮಾಡುತ್ತದೆ. 

ದೇಶದಾದ್ಯಂತ ಸುಮಾರು 45 ದಶಲಕ್ಷ ಮಂದಿ ಒಟ್ಟು 1.6 ಲಕ್ಷಕೋಟಿ ಡಾಲರ್ನಷ್ಟು ವಿದ್ಯಾರ್ಥಿ ಸಾಲವನ್ನು ಹೊಂದಿದ್ದಾರೆ. ಈ ಯೋಜನೆಯಿಂದ ಮುಂದಿನ ದಶಕದಲ್ಲಿ ಸರಕಾರ ಖಜಾನೆಗೆ 400 ಶತಕೋಟಿ ಡಾಲರ್ನಷ್ಟು ಹೊರೆ ಬೀಳಲಿದೆ. ಅಮೆರಿಕದ ಮಧ್ಯಂತರ ಚುನಾವಣೆಯ ದೃಷ್ಟಿಯಿಂದ ಈ ಯೋಜನೆಯನ್ನು ಸರಕಾರ ಮುಂದಿರಿಸಿದೆ ಎಂದು ಟೀಕಿಸಿದ್ದ ಕನ್ಸರ್ವೇಟಿವ್  ಪಕ್ಷದ ಮುಖಂಡರು, ಈ ಯೋಜನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಕಳೆದ ತಿಂಗಳು ಫೆಡರಲ್ ಅಪೀಲು ನ್ಯಾಯಾಲಯ ಈ ಯೋಜನೆಗೆ ತಡೆಯಾಜ್ಞೆ ವಿಧಿಸಿತ್ತು. ಬಳಿಕ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಸರಕಾರ, ಈ ಪ್ರಕರಣವನ್ನು ಗಮನಿಸುವಂತೆ ಕೋರಿತ್ತು.

Similar News