ಪ್ರತಿಭಟನೆಗಳ ಮೇಲೆ `ತುರ್ತುಪರಿಸ್ಥಿತಿ' ಮಟ್ಟದ ಸೆನ್ಸಾರ್ಶಿಪ್: ಚೀನಾ ಕ್ರಮ

Update: 2022-12-02 16:49 GMT

ಬೀಜಿಂಗ್, ಡಿ.2: ಶೂನ್ಯ ಕೋವಿಡ್ ನೀತಿಯನ್ನು ವಿರೋಧಿಸಿ ದೇಶದಾದ್ಯಂತ ಭುಗಿಲೆದ್ದ ಅಸಾಮಾನ್ಯ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಪ್ರತಿಭಟನೆಯ ವಿರುದ್ಧ `ತುರ್ತುಪರಿಸ್ಥಿತಿ' (``emergency'')ಮಟ್ಟದ ಸೆನ್ಸಾರ್ಶಿಪ್ ಕ್ರಮಗಳನ್ನು ಚೀನೀ ಅಧಿಕಾರಿಗಳು ಅನುಸರಿಸುತ್ತಿರುವುದು ಸೋರಿಕೆಯಾದ ಮಾಹಿತಿಯಿಂದ ತಿಳಿದು ಬಂದಿದೆ ಎಂದು `ದಿ ಗಾರ್ಡಿಯನ್'  (``The Guardian'')ವರದಿ ಮಾಡಿದೆ.

ಪ್ರತಿಭಟನೆ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳಲು ಮೀಸಲಾಗಿರುವ ಟ್ವಿಟರ್ ಖಾತೆಯಿಂದ, ಪ್ರತಿಭಟನೆಯ ವರದಿ ಮೊದಲು ಪ್ರಕಟವಾದ ಆನ್ಲೈನ್ ಚೀನೀ ವೇದಿಕೆಗಳಿಗೆ ನೀಡಲಾದ ನಿರ್ದೇಶನಗಳು ಸೋರಿಕೆಯಾಗಿವೆ ಎಂದು ವರದಿ ಹೇಳಿದೆ. 

ವಿಪಿಎನ್ ಗಳು ಹಾಗೂ ಆನ್ಲೈನ್ ಸೆನ್ಸಾರ್ಶಿಪ್ ಗಳನ್ನು ಬೈಪಾಸ್ ಮಾಡುವ (ತಪ್ಪಿಸಿಕೊಳ್ಳುವ) ವಿಧಾನಗಳನ್ನು ದಮನಿಸುವುದು, ಪ್ರತಿಭಟನೆ ನಡೆಸುವವರನ್ನು ಪತ್ತೆಹಚ್ಚಿ ಪ್ರಶ್ನಿಸುವುದು ಇದರಲ್ಲಿ ಸೇರಿದೆ. ಅಧಿಕಾರಿಗಳು ಜಾರಿಗೊಳಿಸಿರುವ ನಿರ್ದೇಶನದಲ್ಲಿ ` ಆಫ್ಲೈನ್ ಅಡಚಣೆಗಳು ಹಾಗೂ ವಿವಿಧ ಪ್ರಾಂತಗಳಲ್ಲಿ ಇತ್ತೀಚೆಗೆ ನಡೆದ `ಹೆಚ್ಚು ಗಮನ ಸೆಳೆದ ಘಟನೆಗಳನ್ನು'  ತ್ವರಿತವಾಗಿ ಗುರುತಿಸಿ, ಅದನ್ನು ಪರಿಶೀಲಿಸಿ ಮತ್ತು ಅದರಲ್ಲಿ ಏನಿದೆ ಎಂಬ ಬಗ್ಗೆ ಪ್ರಾಥಮಿಕ ಹಂತದಲ್ಲಿ ಗಮನ ಹರಿಸಲು ಸಾಧ್ಯವಾಗುವ ನಿಟ್ಟಿನಲ್ಲಿ `ಕಂಟೆಂಟ್ ಮ್ಯಾನೇಜ್ಮೆಂಟ್' ವ್ಯವಸ್ಥೆಯನ್ನು ಬಲಗೊಳಿಸುವಂತೆ' ನಿರ್ವಾಹಕರಿಗೆ ಆದೇಶಿಸಲಾಗಿದೆ.

`ಶಾಂಘೈನಲ್ಲಿ ವಿನಾಶಕಾರಿ ರಾಜಕೀಯ ಘೋಷಣೆಗಳು ಕಾಣಿಸಿಕೊಂಡವು. ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜಗತ್ತಿನ ಗಮನ ಸೆಳೆಯುವ ಮಟ್ಟದಲ್ಲಿ ರಾಜಕೀಯ ಸಭೆ ನಡೆಸಿದರು. ಇಮೇಜ್ಗೆ ಧಕ್ಕೆ ತರುವ ವಿದೇಶಿ ಮಾಧ್ಯಮಗಳ ಕಾರ್ಯ ಹೆಚ್ಚಿತು' ಎಂದು ನಿರ್ದೇಶನದಲ್ಲಿ ಉಲ್ಲೇಖಿಸಲಾಗಿದೆ. ಚೀನಾದ `ಗ್ರೇಟ್ ಫೈರ್ವಾಲ್' ಎಂದು ಕರೆಯಲ್ಪಡುವ ವ್ಯವಸ್ಥೆಯಿಂದ ನುಣುಚಿಕೊಳ್ಳಲು ನಾಗರಿಕರಲ್ಲಿ ಆಸಕ್ತಿ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. 

ಪ್ರದರ್ಶನಗಳನ್ನು ಕಟ್ಟುನಿಟ್ಟಾಗಿ ಸೆನ್ಸಾರ್ ಮಾಡಲಾಗಿದ್ದರೂ ಪ್ರತಿಭಟನಾಕಾರರು ಮತ್ತು ಇತರ ನಾಗರಿಕರು ಚೀನಾದಲ್ಲಿ ಚೀನಾದಲ್ಲಿ ನಿಷೇಧಿಸಲಾಗಿರುವ ಚೀನೀಯೇತರ ಸುದ್ಧಿ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳನ್ನು ಪ್ರವೇಶಿಸಲು ವಿಪಿಎನ್ ಗಳನ್ನು ಬಳಸಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

Similar News