ಉಡುಪಿ | ಬಿಡುಗಡೆಯಾದ ಸೀಮೆಎಣ್ಣೆ ಹಂಚಿಕೆಗೆ 15 ದಿನಗಳ ಗಡುವು

ನಾಡದೋಣಿ ಮೀನುಗಾರರಿಂದ ಕಾಲ್ನಡಿಗೆ- ಹಕ್ಕೋತ್ತಾಯ ಆಂದೋಲನ

Update: 2022-12-03 10:33 GMT

ಉಡುಪಿ, ಡಿ.3: ಕೇಂದ್ರ ಸರಕಾರ ನ.2ರಂದು 3000 ಕೆಎಲ್ ಸೀಮೆಎಣ್ಣೆಯನ್ನು ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳ ನಾಡದೋಣಿಗಳಿಗೆ ಬಿಡುಗಡೆ ಮಾಡಿದ್ದು, ಈವರೆಗೆ ನಾಡದೋಣಿ ಮೀನುಗಾರಿಕೆಗೆ ಸೀಮೆಎಣ್ಣೆ ಸಮರ್ಪಕವಾಗಿ ಸಿಕ್ಕಿಲ್ಲ. ಮುಂದಿನ 15 ದಿನಗಳೊಳಗೆ ಎಲ್ಲ ನಾಡದೋಣಿಗಳಿಗೆ ಸೀಮೆಎಣ್ಣೆ ಸಮರ್ಪಕವಾಗಿ ಸಿಗದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸ ಲಾಗುವುದು ಎಂದು ಕರ್ನಾಟಕ ರಾಜ್ಯ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಎಚ್ಚರಿಕೆ ನೀಡಿದ್ದಾರೆ.

ನಾಡದೋಣಿ ಮೀನುಗಾರರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಬೈಂದೂರು ಹಾಗೂ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಶನಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಹಕ್ಕೋತ್ತಾಯ ಆಂದೋಲನದಲ್ಲಿ ಅವರು ಮಾತನಾಡುತಿದ್ದರು.

ಕೇಂದ್ರ ಸರಕಾರದಿಂದ ಸಬ್ಸಿಡಿ ಸೀಮೇಎಣ್ಣೆ ಬಿಡುಗಡೆಯಾಗದೆ ಇದ್ದಾಗ ರಾಜ್ಯ ಸರಕಾರ ಇಂಡಸ್ಟ್ರೀಯಲ್ ಸೀಮೆಎಣ್ಣೆಯನ್ನು ಖರೀದಿ ಮಾಡಿ ಸಬ್ಸಿಡಿ ದರದಲ್ಲಿ ನಾಡದೋಣಿ ಮೀನುಗಾರರಿಗೆ ನಿಯಮಿತವಾಗಿ ನೀಡುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಮತ್ಸಸಂಪದ ಯೋಜನೆಯಲ್ಲಿ ಸಾಂಪ್ರದಾಯಿಕ ದೋಣಿಗಳ ಮೋಟರೀಕರಣಕ್ಕೆ ಕೊಡುತ್ತಿರುವ ಸಹಾಯಧನ ವನ್ನು ಕೈಬಿಡಲಾಗಿದ್ದು, 2016ರಿಂದ ಈವರೆಗೆ ಎಲ್ಲ ಬಾಕಿ ಉಳಿದಿರುವ ಅರ್ಜಿ ದಾರರಿಗೆ ತಕ್ಷಣ ಸಹಾಯಧನವನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದ ಕೆಲವು ಭಾಗಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಮೀನುಗಾರಿಕಾ ನಾಡದೋಣಿಗಳಿಗೆ ಅಪಾರ ನಷ್ಟ ಉಂಟಾಗಿದ್ದು, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರಕಾರದಿಂದ ಗರಿಷ್ಠ ಪರಿಹಾರ ನೀಡಬೇಕು. ರಾಜ್ಯ ಸರಕಾರ ಮುಂದಿನ ಬಜೆಟ್‌ನಲ್ಲಿ ನಾಡದೋಣಿ ಮೀನುಗಾರರ ಅಭಿವೃದ್ಧಿಗಾಗಿ 250 ಕೋಟಿಗೂ ಅಧಿಕ ಅನುದಾನವನ್ನು ಮೀಸರಿಸಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಮಾತನಾಡಿ, ನಾಡದೋಣಿಯವರಿಗೆ ಸೀಮೆಎಣ್ಣೆ ಬಿಡುಗಡೆ ಯಾದರೂ ಸಮಪರ್ಕವಾಗಿ ಸಿಗುತ್ತಿಲ್ಲ. ಈ ಹೋರಾಟ ಪ್ರಾರಂಭ ಅಷ್ಟೆ. ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ತೀವ್ರ ಹೋರಾಟ ನಡೆಸ ಲಾಗುವುದು. ಮೀನುಗಾರರ ಡಿಸೇಲ್ ಸಮಸ್ಯೆ ಕೂಡ ಇದೆ. ಸರಕಾರ ಕೇವಲ ಆಶ್ವಾಸನೆ ಮಾತ್ರ ನೀಡುತ್ತಿದೆ. ಯಾವುದಕ್ಕೂ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಸಮುದ್ರದಲ್ಲಿ ಮೀನು ಇದ್ದರೂ ಸೀಮೆಎಣ್ಣೆ ಇಲ್ಲದೆ ನಾಡದೋಣಿಯವರು ಮೀನುಗಾರಿಕೆ ಮಾಡು ವಂತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಸೀಮೆಎಣ್ಣೆಯನ್ನು ನೀಡಬೇಕು. ಇದಕ್ಕಾಗಿ ಬಜೆಟ್‌ನಲ್ಲಿ ಹಣ ಮೀಸರಿಸಬೇಕು. ಸೀಮೆಎಣ್ಣೆ ಪ್ರತಿ ತಿಂಗಳು ಸಮಪರ್ಕವಾಗಿ ಸಿಗದಿದ್ದರೆ ಈ ಹೋರಾಟವನ್ನು ಆಂದೋಲನ ರೀತಿಯಲ್ಲಿ ಮಾಡಬೇಕು ಎಂದು ತಿಳಿಸಿದರು.

ಇದಕ್ಕೂ ಮೊದಲು ಉಡುಪಿ ಎಂಜಿಎಂ ಕಾಲೇಜಿನ ಬಳಿಯಿಂದ ಸಾವಿರಾರು ನಾಡದೋಣಿ ಮೀನುಗಾರರು, ಕಾಲ್ನಡಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆಗಮಿಸಿದರು. ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

ಮನವಿಯನ್ನು ಅಪರ ಜಿಲ್ಲಾಧಿಕಾರಿ ವೀಣಾ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರ್ನಾಟಕ ರಾಜ್ಯ ನಾಡದೋಣಿ ಮೀನುಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋಪಾಲ ಆರ್.ಕೆ., ಬೈಂದೂರು ವಲಯ ಸಂಘದ ಮಾಜಿ ಅಧ್ಯಕ್ಷ ರಾಮ ಚಂದ್ರ ಖಾರ್ವಿ, ವಲಯ ಗೌರವಾಧ್ಯಕ್ಷ ಮದನ್ ಕುಮಾರ್, ಮುಖಂಡರಾದ ಪುರಂದರ ಕೋಟ್ಯಾನ್, ಮುಹಮ್ಮದ್ ಅಝೀಝ್, ಯಶವಂತ್ ಖಾರ್ವಿ, ನಗರಸಭೆ ಸದಸ್ಯ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

Similar News

ನಾಪತ್ತೆ