ರಶ್ಯ ತೈಲಕ್ಕೆ ಬೆಲೆ ನಿಗದಿಗೊಳಿಸಿದ ಜಿ7 ಗುಂಪು

Update: 2022-12-03 16:27 GMT

ಬರ್ಲಿನ್, ಡಿ.3: ರಶ್ಯದಿಂದ ಕಡಲ ಮೂಲಕ ಸಾಗಿಸುವ ಕಚ್ಛಾತೈಲದ ಪ್ರತೀ ಬ್ಯಾರೆಲ್ ಬೆಲೆಯ ಮಿತಿಯನ್ನು 60 ಡಾಲರ್‍ಗೆ ನಿಗದಿಗೊಳಿಸಲು ಜಿ7 ದೇಶಗಳ ಗುಂಪು ಹಾಗೂ ಆಸ್ಟ್ರೇಲಿಯಾ  (Australia)ಶುಕ್ರವಾರ ಒಪ್ಪಿಕೊಂಡಿವೆ.

ಆರಂಭದಲ್ಲಿ ಪ್ರಬಲವಾಗಿ ಪ್ರತಿರೋಧಿಸಿದ್ದ ಪೋಲಂಡ್‍ನ ಮನ ಒಲಿಸಲು ಯಶಸ್ವಿಯಾದ ಬಳಿಕ  ಯುರೋಪಿಯನ್ ಯೂನಿಯನ್ ಈ ಪ್ರಸ್ತಾವನೆಗೆ ಬೆಂಬಲ ಸೂಚಿಸಿತು. ಬೆಲೆ ಮಿತಿ ನಿರ್ಧಾರ ಡಿಸೆಂಬರ್ 5ರಿಂದ ಅಥವಾ ಆ ಬಳಿಕ ಶೀಘ್ರದಲ್ಲಿ ಜಾರಿಗೆ ಬರಲಿದೆ ಎಂದು ಜಿ7 ಮತ್ತು ಆಸ್ಟ್ರೇಲಿಯಾ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಉಕ್ರೇನ್ ವಿರುದ್ಧದ ಆಕ್ರಮಣಕಾರಿ ಯುದ್ಧದಿಂದ ರಶ್ಯ ಲಾಭ ಪಡೆಯುವುದನ್ನು ತಡೆಯಲು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಬೆಂಬಲಿಸಲು ಮತ್ತು ರಶ್ಯದ ಆಕ್ರಮಣಕಾರಿ ಯುದ್ಧದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವ ತನ್ನ ಪ್ರತಿಜ್ಞೆಯನ್ನು ಜಿ7 ಪೂರೈಸುತ್ತಿದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

ಜಿ7 ಬೆಲೆ ಮಿತಿಯು ಯುರೋಪಿಯನ್ ಯೂನಿಯನ್ ಹೊರತಾದ ದೇಶಗಳಿಗೆ ಸಮುದ್ರದ ಮೂಲಕ ರಶ್ಯದ ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಆದರೆ ಈ ತೈಲವು ಬೆಲೆ ಮಿತಿಗಿಂತ ಕಡಿಮೆ ದರಕ್ಕೆ ಮಾರಾಟವಾಗಬೇಕು ಎಂಬ ಶರತ್ತು ವಿಧಿಸಲಾಗಿದೆ. ಇಲ್ಲದಿದ್ದರೆ ವಿಶ್ವದಾದ್ಯಂತ ರಶ್ಯದ ಕಚ್ಛಾತೈಲ ಸರಕು ನಿರ್ವಹಣೆ, ವಿಮೆ, ಮರು-ವಿಮೆಯನ್ನು ನಿಷೇಧಿಸಲಾಗುತ್ತದೆ. ವಿಶ್ವದ ಬಹುತೇಕ ಪ್ರಮುಖ ಶಿಪ್ಪಿಂಗ್ ಹಾಗೂ ವಿಮೆ ಸಂಸ್ಥೆಗಳು ಜಿ7 ದೇಶಗಳಲ್ಲಿ ಇರುವುದರಿಂದ ಬೆಲೆ ಮಿತಿಗಿಂತ ಹೆಚ್ಚಿನ ದರಕ್ಕೆ ತೈಲ ಮಾರುವುದು ರಶ್ಯಕ್ಕೆ ಕಷ್ಟವಾಗಲಿದೆ.

ಇಂಧನ ಮತ್ತು ಆಹಾರ ಬೆಲೆಯೇರಿಕೆಯಿಂದ ತತ್ತರಿಸಿರುವ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಬೆಲೆ ಮಿತಿಯಿಂದ ವಿಶೇಷವಾಗಿ ಅನುಕೂಲವಾಗಲಿದೆ ಎಂದು ಅಮೆರಿಕದ ವಿತ್ತ ಕಾರ್ಯದರ್ಶಿ ಜಾನೆಟ್ ಯೆಲೆನ್ ಹೇಳಿದ್ದಾರೆ. ರಶ್ಯದ ಆರ್ಥಿಕತೆಯು ಈಗಾಗಲೇ ಸಂಕುಚಿತಗೊಳ್ಳುತ್ತಿದೆ ಮತ್ತು ಅದರ  ಬಜೆಟ್ ಕ್ಷೀಣಿಸುತ್ತಿದ್ದು, ಇದೀಗ ತೈಲ ಬೆಲೆ ಮಿತಿಯು ರಶ್ಯದ ಬಹುಮುಖ್ಯ ಆದಾಯ ಮೂಲವನ್ನೇ ಕಡಿಮೆಗೊಳಿಸುತ್ತದೆ ಎಂದವರು ಹೇಳಿದ್ದಾರೆ.

ತೈಲದ ಬೆಲೆಯ ಮೇಲೆ ಮಿತಿ ವಿಧಿಸಿರುವುದು ಜಾಗತಿಕ ಮಾರುಕಟ್ಟೆಗೆ  ತೈಲ ಪೂರೈಕೆಯನ್ನು ಸುಸೂತ್ರವಾಗಿಸುತ್ತದೆ. ಡಿಸ್ಕೌಂಟ್ ದರದ ತೈಲ ಪೂರೈಕೆಯನ್ನು ಸಾಂಸ್ಥೀಕರಣಗೊಳಿಸುತ್ತದೆ ಎಂದು ಅಮೆರಿಕದ ವಿತ್ತ ಇಲಾಖೆ ಹೇಳಿದೆ.

Similar News