ಮೊದಲ ಏಕದಿನ: ಭಾರತ ವಿರುದ್ಧ ಬಾಂಗ್ಲಾದೇಶಕ್ಕೆ ರೋಚಕ ಗೆಲುವು

Update: 2022-12-04 14:09 GMT

 ಮೀರ್ಪುರ, ಡಿ.4: ನಾಯಕ ಲಿಟನ್ ದಾಸ್(41 ರನ್, 63 ಎಸೆತ)ಹಾಗೂ ಮೆಹಿದಿ ಹಸನ್ ಮಿರಾಝ್(ಔಟಾಗದೆ 37, 38 ಎಸೆತ)ಅವರ ಸಾಹಸದಿಂದ ಬಾಂಗ್ಲಾದೇಶ ತಂಡ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 1 ವಿಕೆಟ್ ಅಂತರದಿಂದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ರವಿವಾರ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವನ್ನು 186 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದ ಬಾಂಗ್ಲಾ ಗೆಲುವಿಗೆ ಸಾಧಾರಣ ಸವಾಲು ಪಡೆದಿತ್ತು. ಆದರೆ ಮುಹಮ್ಮದ್ ಸಿರಾಜ್(3-32) ನೇತೃತ್ವದ ಭಾರತದ ಬೌಲರ್‌ಗಳ ಕರಾರುವಾಕ್ ದಾಳಿಗೆ ತತ್ತರಿಸಿದ ಬಾಂಗ್ಲಾ 136 ರನ್‌ಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಆಗ ಜೊತೆಯಾದ ಮೆಹಿದಿ ಹಸನ್ ಹಾಗೂ ಮುಸ್ತಫಿಝರ್ರಹ್ಮಾನ್(ಔಟಾಗದೆ 10 ರನ್) ಕೊನೆಯ ವಿಕೆಟ್‌ನಲ್ಲಿ 51 ರನ್ ಜೊತೆಯಾಟ ನಡೆಸಿ 46 ಓವರ್‌ಗಳಲ್ಲಿ 187 ರನ್ ಗಳಿಸಿ ತಂಡಕ್ಕೆ ರೋಚಕ ಹಾಗೂ ಅಪರೂಪದ ಗೆಲುವು ತಂದುಕೊಟ್ಟರು.

ಭಾರತದ ಪರ ಸಿರಾಜ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ವಾಶಿಂಗ್ಟನ್ ಸುಂದರ್(2-17) ಹಾಗೂ ಕುಲದೀಪ್ ಸೇನ್(2-37) ತಲಾ ಎರಡು ವಿಕೆಟ್ ಪಡೆದರು.
 
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಭಾರತವು ಕೆ.ಎಲ್.ರಾಹುಲ್(73 ರನ್,70 ಎಸೆತ) ಅವರ ಅರ್ಧಶತಕದ ಹೊರತಾಗಿಯೂ 41.2 ಓವರ್‌ಗಳಲ್ಲಿ ಕೇವಲ 186 ರನ್‌ಗೆ ಆಲೌಟಾಗಿತ್ತು. 

Similar News