ವಿಶ್ವಕಪ್ 2022: ದಕ್ಷಿಣ ಕೊರಿಯಾ ವಿರುದ್ಧ ಭರ್ಜರಿ ಗೆಲುವನ್ನು ಪೀಲೆಗೆ ಸಮರ್ಪಿಸಿದ ಬ್ರೆಝಿಲ್ ಆಟಗಾರರು

Update: 2022-12-06 13:57 GMT

ದೋಹಾ: ಖತರ್‌ನಲ್ಲಿ ನಡೆಯುತ್ತಿರುವ 2022 ರ ಫಿಫಾ ವಿಶ್ವಕಪ್‌ನಲ್ಲಿ  ಸೋಮವಾರ ದಕ್ಷಿಣ ಕೊರಿಯಾ ವಿರುದ್ಧ 4-1 ಅಂತರದ ಭರ್ಜರಿ ಜಯ ಸಾಧಿಸಿದ ಬ್ರೆಝಿಲ್ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿತು. ನೇಮರ್ ನೇತೃತ್ವದ ಆಟಗಾರರು ಈ ಗೆಲುವನ್ನು ಸಾವೊ ಪಾಲೊ ಆಸ್ಪತ್ರೆಯಿಂದ ಪಂದ್ಯವನ್ನು ವೀಕ್ಷಿಸಿದ ದಂತಕಥೆ ಪೀಲೆಗೆ  ಸಮರ್ಪಿಸಿದರು.

ಕರುಳಿನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಪೀಲೆ ಸದ್ಯ ಈ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಕ್ಷಿಣ ಕೊರಿಯಾವನ್ನು ಸೋಲಿಸಿದ ನಂತರ ಬ್ರೆಝಿಲ್ ಆಟಗಾರರು 82 ವರ್ಷದ ಪೀಲೆಯ ಚಿತ್ರವಿರುವ ಬ್ಯಾನರ್ ಅನ್ನು ಹಿಡಿದು ಅವರಿಗೆ  ಗೌರವ ಸಲ್ಲಿಸಿದರು ಹಾಗೂ  ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಜಯಶಾಲಿಯಾಗಿ ಬರುವಂತೆ ಅವರಿಗೆ ಪ್ರೇರೇಪಿಸಿದರು.

"ಪೀಲೆ ಅವರು ಈಗ ಅನುಭವಿಸುತ್ತಿರುವ ನೋವಿನ ಕುರಿತು ಮಾತನಾಡುವುದು ಕಷ್ಟ, ಆದರೆ ನಾನು ಅವರಿಗೆ ಶುಭ ಹಾರೈಸುತ್ತೇನೆ" ಎಂದು ಪಾದದ ಗಾಯದಿಂದಾಗಿ ವಿಶ್ವಕಪ್‌ನಿಂದ ಬೇಗನೆ ನಿರ್ಗಮಿಸುವ ಭೀತಿಯಲ್ಲಿದ್ದ ನೇಮರ್ ಹೇಳಿದರು.

"ಅವರು ಆದಷ್ಟು ಬೇಗನೇ  ಉತ್ತಮ ಆರೋಗ್ಯದೊಂದಿಗೆ  ಮರಳುತ್ತಾರೆ ಎಂಬ ವಿಶ್ವಾಸ ನನಗಿದೆ ಹಾಗೂ ನಾವು ಅವರನ್ನು ಗೆಲುವಿನಿಂದ ಸಮಾಧಾನಪಡಿಸಬಹುದು" ಎಂದು ಬ್ರೆಝಿಲ್ ಸ್ಟಾರ್ ' Globo 'ಗೆ ತಿಳಿಸಿದರು.

ಬ್ರೆಝಿಲ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು  ಆರನೇ ವಿಶ್ವಕಪ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಬ್ರೆಝಿಲ್ ನ  ಮೊದಲ ಮೂರು ವಿಶ್ವಕಪ್ ವಿಜಯಗಳಲ್ಲಿ ಪೀಲೆ ತಂಡದ ಭಾಗವಾಗಿದ್ದರು

"ಅವರಿಗೆ ನಮ್ಮಿಂದ ಸಾಕಷ್ಟು ಶಕ್ತಿ ಬೇಕು ಹಾಗೂ  ಈ ಗೆಲುವು ಅವರಿಗೆ ಸಮರ್ಪಿಸುವೆ, ಅವರು ಈ ಪರಿಸ್ಥಿತಿಯಿಂದ ಹೊರಬರುತ್ತಾರೆ.  ನಾವು ಅವರಿಗಾಗಿ  ಚಾಂಪಿಯನ್ ಆಗಲು ಸಾಧ್ಯ" ಎಂದು ಬ್ರೆಝಿಲ್ ಆಟಗಾರ ವಿನಿಶಿಯಸ್ ಹೇಳಿದರು.

Similar News