ಫಿಫಾ ವಿಶ್ವಕಪ್: ಗೋಲುಗಳ ಮಳೆ ಸುರಿಸಿದ ಪೋರ್ಚ್‍ಗಲ್ ಎಂಟರ ಘಟ್ಟಕ್ಕೆ

Update: 2022-12-07 02:26 GMT

ಹೊಸದಿಲ್ಲಿ: ಯುವ ಆಟಗಾರ ಗೊಂಕಲೊ ರಮೋಸ್ (Goncalo Ramos) ಫಿಫಾ ವಿಶ್ವಕಪ್-2022ರಲ್ಲಿ ಮೊದಲ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಪೋರ್ಚ್‍ಗಲ್ ತಂಡ ಸ್ವಿಝರ್‌ಲ್ಯಾಂಡ್‌ ಸವಾಲನ್ನು ಸುಲಭವಾಗಿ ಬದಿಗೊತ್ತಿ ಎಂಟರ ಘಟ್ಟಕ್ಕೆ ಮುನ್ನಡೆಯಿತು.

ಬುಧವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ 21 ವರ್ಷ ವಯಸ್ಸಿನ ರಮೋಸ್ ಅವರ ಅತ್ಯದ್ಭುತ ಪ್ರದರ್ಶನದ ನೆರವಿನಿಂದ ಪೋರ್ಚ್‍ಗಲ್, ಸ್ವಿಝರ್‌ಲ್ಯಾಂಡ್‌ ತಂಡವನ್ನು 6-1 ಗೋಲುಗಳಿಂದ ಸದೆಬಡಿಯಿತು.

ದಾಖಲೆಗಳ ವೀರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸ್ಥಾನದಲ್ಲಿ ರಮೋಸ್ ಅವರನ್ನು ಮೈದಾನಕ್ಕೆ ಇಳಿಸುವ ದಿಟ್ಟ ನಿರ್ಧಾರ ಕೈಗೊಂಡ ಪೋರ್ಚ್‍ಗಲ್ ಕೋಚ್ ಫೆರ್ನಾಂಡೊ ಸ್ಯಾಂಟೋಸ್ ನಿರೀಕ್ಷೆಯನ್ನು ಯುವ ಆಟಗಾರ ಹುಸಿ ಮಾಡಲಿಲ್ಲ. 2006ರ ಬಳಿಕ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿದ ಪೋರ್ಚ್‍ಗಲ್ ತಂಡಕ್ಕೆ ಮೊರಾಕ್ಕೊ ಮುಂದಿನ ಹಂತದಲ್ಲಿ ಎದುರಾಳಿ. ಸ್ಪೇನ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿದ ಮೊರಾಕ್ಕೊ ಮಂಗಳವಾರ ಕ್ವಾರ್ಟರ್ ಫೈನಲ್ ತಲುಪಿತ್ತು.

ಮೊದಲ ವಿಶ್ವಕಪ್ ಆಡುತ್ತಿರುವ ರಮೋಸ್, 17ನೇ ನಿಮಿಷದಲ್ಲೇ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ತಂಡದ ಅತ್ಯಂತ ಹಿರಿಯ ಆಟಗಾರ ಪೇಪ್ 33ನೇ ನಿಮಿಷದಲ್ಲಿ ತಂಡಕ್ಕೆ ತಮ್ಮ ಪಾಲಿನ ಕೊಡುಗೆ ನೀಡಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. 51ನೇ ನಿಮಿಷದಲ್ಲಿ ತಮ್ಮ 2ನೇ ಗೋಲು ಸಾಧಿಸಿದ ರಮೋಸ್ ಅವರಿಂದ ಸ್ಫೂರ್ತಿ ಪಡೆದ ರಫೀಲ್ ಕ್ಯುರಿರೊ ಮುನ್ನಡೆಯನ್ನು 4-0ಗೆ ಏರಿಸಿದರು. 58ನೇ ನಿಮಿಷದಲ್ಲಿ ಸ್ವಿಝರ್‌ಲ್ಯಾಂಡ್‌ ನ ಮ್ಯಾನ್ಯುಯಲ್ ಅಕಾಂಜಿ ಎದುರಾಳಿ ತಂಡದ ಏಕೈಕ ಗೋಲು ಬಾರಿಸಿದರು.

ರಮೋಸ್ 67ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಪ್ರಸಕ್ತ ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯ ಮುಕ್ತಾಯದ ಅವಧಿಯಲ್ಲಿ ಬದಲಿ ಆಟಗಾರ ರಫೀಲ್ ಲಿಯೊ ಮತ್ತೊಂದು ಗೋಲು ಗಳಿಸಿದರು.

ಇದುವರೆಗೆ ಕತರ್‌ನಲ್ಲಿ 10 ನಿಮಿಷಗಳ ಕಾಲ ಬದಲಿ ಆಟಗಾರನಾಗಿ ಮಾತ್ರ ಮೈದಾನಕ್ಕೆ ಇಳಿದಿದ್ದ ಯುವ ಆಟಗಾರ ರಮೋಸ್, ಸಿಕ್ಕಿದ ಅವಕಾಶವನ್ನು ಸ್ಮರಣೀಯವಾಗಿಸಿದರು.

Similar News