ಸೌದಿ ಅರೇಬಿಯಾ ಕ್ಲಬ್‌ನೊಂದಿಗೆ ಯಾವುದೇ ಒಪ್ಪಂದವಾಗಿಲ್ಲ: ರೊನಾಲ್ಡೊ ಸ್ಪಷ್ಟನೆ

Update: 2022-12-08 06:11 GMT

ಹೊಸದಿಲ್ಲಿ: ಸೌದಿ ಅರೇಬಿಯಾ ಕ್ಲಬ್‌ನೊಂದಿಗೆ ಯಾವುದೇ ಒಪ್ಪಂದವಾಗಿಲ್ಲ ಎಂದು ಪೋರ್ಚುಗಲ್ ತಂಡದ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸ್ಪಷ್ಟಪಡಿಸಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನೊಂದಿಗೆ ಒಪ್ಪಂದ ಮುರಿದು ಬಿದ್ದ ನಂತರ ಪೋರ್ಚುಗಲ್ ತಂಡದ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸೌದಿ ಅರೇಬಿಯಾದ ಅಲ್ ನಸ್ರ್ ಕ್ಲಬ್‌ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿತ್ತು. ಅಲ್ ನಸ್ರ್ ಕ್ಲಬ್‌ನೊಂದಿಗೆ ಭಾರಿ ಮೊತ್ತದ 200 ದಶ ಲಕ್ಷ ಯೂರೊ ಒಡಂಬಡಿಕೆಗೆ ಕ್ರಿಸ್ಟಿಯಾನೊ ರೊನಾಲ್ಡೊ ಸಹಿ ಹಾಕಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಊಹಾಪೋಹಗಳ ಕುರಿತು ಮೌನ ಮುರಿದಿರುವ ಕ್ರಿಸ್ಟಿಯಾನೊ ರೊನಾಲ್ಡೊ, ಸೌದಿ ಅರೇಬಿಯಾದ ಅಲ್ ನಸ್ರ್ ಕ್ಲಬ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಸುದ್ದಿಯನ್ನು ನಿರಾಕರಿಸಿದ್ದಾರೆ‌.

ಈ ಕುರಿತು ಹಬ್ಬಿರುವ ಸುದ್ದಿಗಳು ಸುಳ್ಳು ಎಂದು ಸ್ಪಷ್ಟನೆನೀಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ರೆಡ್ಡೆವಿಲ್ಸ್ ಕ್ಲಬ್‌ನೊಂದಿಗೆ ಸಂಬಂಧ ಕಡಿದುಕೊಂಡ ನಂತರ ಯಾವುದೇ ಕ್ಲಬ್ ತಂಡದ ಸದಸ್ಯನಲ್ಲದ ಏಕೈಕ ಪೋರ್ಚುಗೀಸ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಆಗಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಕ್ಲಿಷ್ಟಕಾಲ ಘಟ್ಟವನ್ನು ಹಾದುಹೋಗುತ್ತಿರುವ ಕ್ರಿಸ್ಟಿಯಾನೊ ರೊನಾಲ್ಡೊ, ಮೊದಲಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌  ವ್ಯವಸ್ಥಾಪಕ, ಕ್ಲಬ್‌ನ ಮಾಲಕರೊಂದಿಗೂ ಮನಸ್ತಾಪ ಮಾಡಿಕೊಂಡಿದ್ದರು. ಈ ಪೈಕಿ ಕೆಲವರು ರೊನಾಲ್ಡೊ ಅವರನ್ನು ಕ್ಲಬ್‌ನಿಂದ ಹೊರದೂಡಲು ಪ್ರಯತ್ನಿಸುತ್ತಿದ್ದರು. ಕೊನೆಗೆ ರೊನಾಲ್ಡೊ ಮತ್ತು ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್ ಪರಸ್ಪರ ಬೇರ್ಪಡುವ ನಿರ್ಧಾರಕ್ಕೆ ತಲುಪಿದವು.

ಫೀಫಾ 2022ರ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಈ ಅನಿವಾರ್ಯ ಆಟಗಾರ ಪೋರ್ಚುಗಲ್‌ನ ವಿಶ್ವಕಪ್ ಫುಟ್‌ಬಾಲ್ ಪಯಣವನ್ನು ಮುನ್ನಡೆಸುತ್ತಾರೆ ಎಂದು ಮೊದಲಿಗೆ ನಿರೀಕ್ಷಿಸಲಾಗಿತ್ತು. ಆದರೆ, ಈತನ ಅನುಪಸ್ಥಿತಿಯಲ್ಲೇ ಪೋರ್ಚುಗಲ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ, ಮೊದಲ ನಾಕೌಟ್ ಪಂದ್ಯದಲ್ಲಿ ಸ್ವಿಜರ್ಲೆಂಡ್ ಎದುರು ರೊನಾಲ್ಡೊ ಅವರನ್ನು ಕೈಬಿಟ್ಟಿದ್ದ ಪೋರ್ಚುಗಲ್ ತಂಡ, ಅವರ ಬದಲಿಗೆ ಗೊನಾಲ್ಕೊರಾಮೋಸ್ ಅವರಿಗೆ ಅವಕಾಶ ನೀಡಿತ್ತು. ಈ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ರಾಮೋಸ್, ಪೋರ್ಚುಗಲ್ ತಂಡಕ್ಕೆ 6-1 ಅಂತರದ ಭರ್ಜರಿ ಗೆಲುವು ತಂದು ಕೊಟ್ಟಿದ್ದರು.

ಮೊರೊಕ್ಕೊ ಎದುರು ನಡೆಯಲಿರುವ ಕ್ವಾಟರ್ ಫೈನಲ್ ಪಂದ್ಯದಲ್ಲೂ ಅಂತಿಮ ಹನ್ನೊಂದರ ಬಳಗದಲ್ಲಿ ರೊನಾಲ್ಡೊ ಸ್ಥಾನ ಪಡೆಯುವ ಸಾಧ್ಯತೆ ಕ್ಷೀಣಿಸಿದೆ. ರೊನಾಲ್ಡೊರ ಗೋಲು ಹೊಡೆಯುವ ಚಮತ್ಕಾರ ಮಸುಕಾಗಿರುವುದರಿಂದ ವಿಶ್ವಕಪ್ ಮುಕ್ತಾಯವಾದ ನಂತರ ಅತ್ಯುತ್ತಮ ಕ್ಲಬ್‌ವೊಂದರಲ್ಲಿ ಸ್ಥಾನಗಿಟ್ಟಿಸುವುದು ಈ ಫುಟ್‌ಬಾಲ್ಸ್ಟಾರ್‌ಗೆ ಕಠಿಣವಾಗುವ ಸಾಧ್ಯತೆ ದಟ್ಟವಾಗಿದೆ.

Similar News