ಪೋರ್ಚುಗಲ್ ತಂಡ ತ್ಯಜಿಸುವುದಾಗಿ ಬೆದರಿಕೆ ಹಾಕಿದ್ದೇನೆಂಬ ವರದಿಗೆ ಸ್ಪಷ್ಟನೆ ನೀಡಿದ ಸ್ಟಾರ್ ಆಟಗಾರ ರೊನಾಲ್ಡೊ

Update: 2022-12-08 16:50 GMT

 ದೋಹಾ, ಡಿ.8: ಸ್ವಿಟ್ಸರ್‌ಲ್ಯಾಂಡ್ ವಿರುದ್ಧದ ಅಂತಿಮ-16ರ ಪಂದ್ಯದಿಂದ ತನ್ನನ್ನು ಹೊರಗಿಟ್ಟ ಬಳಿಕ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ Cristiano Ronaldo  ವಿಶ್ವಕಪ್ ತಂಡವನ್ನು ತ್ಯಜಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ವರದಿಯನ್ನು ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್(ಎಫ್‌ಪಿಎಫ್)ಗುರುವಾರ ನಿರಾಕರಿಸಿದೆ.

ಇದೇ ವೇಳೆ ಸ್ವತಃ ರೊನಾಲ್ಡೊ ಕೂಡ ಈ ವರದಿಯನ್ನು ತಳ್ಳಿ ಹಾಕಿದ್ದು, ಇವುಗಳು ಬಾಹ್ಯ ಶಕ್ತಿಯಾಗಿವೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ರೊನಾಲ್ಡೊ, ಒಂದು ಗುಂಪು ಬಾಹ್ಯ ಶಕ್ತಿಗಳಿಗೆ ಹೆಚ್ಚು ಹತ್ತಿರವಾಗಿದೆ. ಯಾವುದೇ ಎದುರಾಳಿಯೊಂದಿಗೆ ಹೋರಾಡಲು ದೇಶ ತುಂಬಾ ಧೈರ್ಯಶಾಲಿಯಾಗಿದೆ ಎಂದು ಬರೆದಿದ್ದಾರೆ.

ಮಂಗಳವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಕ್ಕೆ 37ರ ಹರೆಯದ ರೊನಾಲ್ಡೊರನ್ನು ಕೈಬಿಟ್ಟಿರುವುದು ಎಲ್ಲರನ್ನು ಹೆಬ್ಬೇರಿಸುವಂತೆ ಮಾಡಿತ್ತು. ರೊನಾಲ್ಡೊ ಬದಲಿ ಆಟಗಾರ ಗೊನ್ಸಾಲೊ ರಾಮೋಸ್ ಹ್ಯಾಟ್ರಿಕ್ ಗೋಲು ಗಳಿಸಿ ತಂಡವು 6-1 ಅಂತರದಿಂದ ಜಯ ಸಾಧಿಸಲು ನೆರವಾಗಿದ್ದರು.

ಕೋಚ್ ಫೆರ್ನಾಂಡೊ ಸ್ಯಾಂಟೋಸ್‌ರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ರೊನಾಲ್ಡೊ ರಾಷ್ಟ್ರೀಯ ತಂಡವನ್ನು ತ್ಯಜಿಸುವ ಬೆದರಿಕೆ ಹಾಕಿದ್ದರು ಎಂದು ಪೋರ್ಚುಗೀಸ್‌ನ 'ಪಬ್ಲಿಕೇಶನ್ ರೆಕಾರ್ಡ್' ವರದಿ ಮಾಡಿತ್ತು.

 ಖತರ್‌ನಲ್ಲಿರುವಾಗ ಯಾವುದೇ ಸಮಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರು ರಾಷ್ಟ್ರೀಯ ತಂಡವನ್ನು ತೊರೆಯುವುದಾಗಿ ಬೆದರಿಕೆ ಹಾಕಿಲ್ಲ ಎಂದು ಫೆಡರೇಶನ್ ಸ್ಪಷ್ಟನೆ ನೀಡಿದೆ. ಪ್ರತಿದಿನ ರೊನಾಲ್ಡೊ ರಾಷ್ಟ್ರೀಯ ತಂಡ ಹಾಗೂ ದೇಶದ ಸೇವೆಯಲ್ಲಿ ಅನನ್ಯ ದಾಖಲೆಯನ್ನು ನಿರ್ಮಿಸುತ್ತಿದ್ದಾರೆ. ಅದನ್ನು ಗೌರವಿಸಬೇಕು ಎಂದು ಫೆಡರೇಶನ್ ಹೇಳಿದೆ.

ರೊನಾಲ್ಡೊ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ಪೋರ್ಚುಗೀಸ್ ಆಟಗಾರ ಹಾಗೂ ಸಾರ್ವಕಾಲಿಕ ಶ್ರೇಷ್ಠ ಅಂತರ್‌ರಾಷ್ಟ್ರೀಯ ಗೋಲ್‌ಸ್ಕೋರರ್ ಆಗಿದ್ದಾರೆ.

Similar News